ಪಾಟ್ನಾ: ಧೈರ್ಯವಿದ್ದರೆ ಉತ್ತರ ಪ್ರದೇಶದಲ್ಲಿ ಮದ್ಯ ನಿಷೇಧಿಸಿ ಮದ್ಯ ನಿಗ್ರಹ ಪಡೆ ರಚಿಸುವಂತೆ ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಶನಿವಾರ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದಲ್ಲಿ ಸದ್ಯ ರೋಮಿಯೊ ನಿಗ್ರಹ ಪಡೆ(anti-Romeo squad) ಭಾರಿ ಸುದ್ದಿ ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಮತ್ತು ಸಮಾಜಕ್ಕೆ ಮಾರಕ. ಜನರನ್ನು ದಾರಿ ತಪ್ಪಿಸುವ ಬದಲು ಮದ್ಯ ನಿಗ್ರಹ ಪಡೆ(anti-liquor squad) ರಚಿಸಲಿ ಎಂದು ಹೇಳಿದ್ದಾರೆ.
ಆದಿತ್ಯನಾಥ್ ಅವರು ನಿಜವಾಗಲೂ ಒಬ್ಬ ಯೋಗಿಯಾಗಿದ್ದರೆ ಮತ್ತು ಪ್ರಾಮಾಣಿಕ ಧಾರ್ಮಿಕ ಸಲಹೆಗಾರರಾಗಿದ್ದರೆ ಮೊದಲು ಉತ್ತರ ಪ್ರದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ.
ನಿತಿಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಕಳೆದ ವರ್ಷ ಏಪ್ರಿಲ್ ನಿಂದ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಿದೆ.