ಕೇರಳ ರಾಜ್ಯ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್
ತಿರುವನಂತರಪುರ: ಮಹಿಳೆಯೊಂದಿಗೆ ಮೊಬೈಲ್ ಫೋನ್'ನಲ್ಲಿ ಅಶ್ಲೀಲವಾಗಿ ಮಾತುಕತೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೇರಳ ಸಚಿವ ಮಹಿಳೆಯೊಬ್ಬರೊಂದಿಗೆ ಮೊಬೈಲ್ ಫೋನಿನಲ್ಲಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ಕ್ಲಿಪ್ ವೊಂದು ಮಲಯಾಳಂ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಆರೋಪ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಶೀಂದ್ರನ್ ಅವರು ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಈ ಬಗ್ಗೆ ನನಗೆ ವಿಶ್ವಾಸವಿದೆ. ರಾಜೀನಾಮೆ ಸಲ್ಲಿಸುತ್ತಿದ್ದೇನೆಂದರೆ ನಾನು ಆರೋಪವನ್ನು ಒಪ್ಪಿಕೊಂಡಿದ್ದೇನೆಂದಲ್ಲ. ಮಲಪ್ಪುರಂನಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಎಲ್'ಡಿಎಫ್ ಗೆ ಮುಜುಗರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುವುದು ನನಗಿಷ್ಟವಿಲ್ಲ. ಹೀಗಾಗಿ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಆರೋಪ ಸಂಬಂಧ ತನಿಖೆ ನಡೆಯಲು. ಸತ್ಯಾಂಶ ಹೊರಬರಲಿ ಎಂದು ಹೇಳಿದ್ದಾರೆ.
ರಾಜಕೀಯ ನೈತಿಕ ಹೊಮೆಯನ್ನು ಹೊತ್ತು ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಸುಧೀರ್ಘ ತನಿಖೆ ಹಾಗೂ ಸಮಗ್ರ ವರದಿಗಳ ಮೂಲಕವಷ್ಟೇ ಸತ್ಯಾಂಶ ಹೊರಬರಬೇಕಿದೆ. ವಿಚಾರಣೆಗೆ ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.