ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಗೋರಖ್ಪುರ: ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನ ಏರುತ್ತಿದ್ದಂತೆಯೇ ಕಠಿಣ ನಿರ್ಧಾರಗಳಿಗೆ ಯೋಗಿ ಆದಿತ್ಯನಾಥ್ ಅವರು ಸಾಕ್ಷಿಯಾಗುತ್ತಿದ್ದಾರೆ. ಕಸಾಯಿಖಾನೆ, ಗೋ ಕಳ್ಳಸಾಗಣೆ ಕುರಿತಂತೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಆದಿತ್ಯನಾಥ್ ಅವರು ಇದೀಗ ಕ್ರಿಮಿನಲ್ ಗಳು ಹಾಗೂ ಸಮಾಜಘಾತುಕ ಚಟುವಟಿಕೆ ನಡೆಸುವವರಿಗೆ, ಆಲಸ್ಯ ಸಚಿವರಿಗೆ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನ ಗದ್ದುಗೆ ಏರಿದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ಗೋರಖ್ಪುರಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ, ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿರುವ ಅವರು, ಕ್ರಿಮಿನಲ್ ಗಳಿಗೆ, ಗೂಂಡಾ ಚಟುವಟಿಕೆಗಳಿಗೆ ಬೆಂಬಲ ನೀಡುವವರು, ಮಾಫಿಯಾ ನಡೆಸುವವರಿಗೆ ಉತ್ತರಪ್ರದೇಶ ರಾಜ್ಯ ಬಿಟ್ಟುಹೋಗುವ ಆಯ್ಕೆಯನ್ನು ನೀಡಲಾಗಿದೆ. ಇಲ್ಲದೆ, ಹೋದಲ್ಲಿ ಅವರಿರುವ ಜಾಗ ಏನೆಂಬುದನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಂದಿನ 2 ತಿಂಗಳುಗಳಲ್ಲಿ ರಾಜ್ಯ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಜನತೆ ನೋಡಲಿದ್ದಾರೆ. ರಾಜ್ಯವನ್ನು ಶುದ್ಧ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ಆ ಕೆಲಸವನ್ನು ಮಾಡುತ್ತೇನೆ. ಈ ಹಿಂದಿದ್ದ ಸರ್ಕಾರಗಳು ಉತ್ತರಪ್ರದೇಶ ರಾಜ್ಯದಲ್ಲಿ ಕತ್ತಲೆ ಕವಿಯುವಂತೆ ಮಾಡಿತ್ತು. ಮಹಿಳೆಯರಿಗೆ ಅಭದ್ರತೆ ಕಾಡುತ್ತಿತ್ತು. ಇದೀಗ ಈ ಚಿಂತನೆ ಹಾಗೂ ಆಲೋಚನೆಗಳನ್ನು ದೂರಾಗುವಂತೆ ನಾನು ಮಾಡುತ್ತೇನೆಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಸಚಿವರಿಗೆ ಕಠಿಣ ಸಂದೇಶವನ್ನು ರವಾನಿಸಿರುವ ಅವರು, ನಾನೊಬ್ಬ ಕಾರ್ಯವ್ಯಸನಿ ವ್ಯಕ್ತಿಯಾಗಿದ್ದು, ನನ್ನೊಂದಿಗೆ ಕೆಲಸ ಮಾಡುವವರೂ ಕೂಡ ಹಾಗೆಯೇ ಇರಬೇಕು. ಸಾರ್ವಜನಿಕರಿಗೆ ನಿಮ್ಮ ಮನೆ ಹಾಗೂ ಕಚೇರಿಯ ಬಾಗಿಲು ಯಾವಾಗಲು ತೆಗೆದಿರಬೇಕು. ಸಮಾಜದ ಕೊನೆಯ ವ್ಯಕ್ತಿಯವರೆಗೂ ನಮ್ಮ ಸರ್ಕಾರ ಸಂಪರ್ಕಿಸುವಂತಿರಬೇಕು. ಪ್ರತೀನಿತ್ಯ 18-20 ಗಂಟೆಗಳ ಕಾಲ ಕೆಲಸ ಮಾಡುವವರು ನನ್ನೊಂದಿಗರಬಹುದು. ಆಗುವಿದಿಲ್ಲ ಎನ್ನುವವರು ಹುದ್ದೆಯನ್ನು ತೊರೆದು ಹೋಗಬಹುದು.
ಜಾತಿ, ಲಿಂಗ ಹಾಗೂ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡಬಾರದು. ಎಲ್ಲರಿಗೂ ಅಭಿವೃದ್ಧಿಯೊಂದೇ ಮಂತ್ರವಾಗಿರಬೇಕು. ಯಾವುದೇ ಕಾರಣಕ್ಕೂ ಯಾರನ್ನೂ ಓಲೈಸುವ ಪ್ರಯತ್ನವಿಲ್ಲ. ಮುಗ್ಧ ಜನರಿಗೆ ಕಿರುಕುಳ ನೀಡದಂತೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವುದು, ಯುವಕರಿಗೆ ಅವಕಾಶಗಳನ್ನು ಕಲ್ಪಿಸುವುದಿ, ಕಾರ್ಮಿಕರಿಗೆ ಮತ್ತು ರೈತರಿಗೆ ಬೆಂಬಲ ನೀಡುವುದು ನಮ್ಮ ಸರ್ಕಾರ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ವರ್ಷಗಳು ಮಾತ್ರ ಬಾಕಿಯಿದ್ದು, ಪಕ್ಷದ ಕಾರ್ಯಕರ್ತರು ಈ ಬಗ್ಗೆ ಈಗಾಲೇ ಸಿದ್ಧತೆಗಳನ್ನು ನಡೆಸಬೇಕಿದೆ. ರಾಜ್ಯ ಸರ್ಕಾರ ಕಾರ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬಂದರೂ ಮೊದಲು ನನಗೆ ಮಾಹಿತಿ ನೀಡಬೇಕು. ಬಡ ಕುಟುಂಬಸ್ಥ ಹೆಣ್ಣು ಮಕ್ಕಳ ವಿವಾಹಕ್ಕೆ ಸರ್ಕಾರ ನೆರವು ನೀಡುತ್ತದೆ. ಉದ್ಯೋಗ ಅರಸಿ ಇತರೆ ರಾಜ್ಯಕ್ಕೆ ಯುವಕರು ವಲಸೆ ಹೋಗುತ್ತಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics