ಲಖನೌ: ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡುತ್ತಿರುವ ಪರಿಣಾಮ ಯೋಗಿ ಆದಿತ್ಯನಾಥ್ ವಿರುದ್ಧ ಮಾಂಸ ಮಾರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಾ.27 ರಿಂದ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಮಾಂಸ ಮಾರಾಟಗಾರರಿಗೆ ಮೀನು ಮಾರಾಟಗಾರರೂ ಸಹ ಬೆಂಬಲ ಸೂಚಿಸಿದ್ದು, ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಲಖನೌ ನ ಬಕ್ರಾ ವ್ಯಾಪಾರಿ ಮಂಡಳದ ಪದಾಧಿಕಾರಿ ಮುಬೀನ್ ಖುರೇಶಿ ತಿಳಿಸಿದ್ದಾರೆ. ಇದೇ ವೇಳೆ ಪ್ರತಿಭಟನೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿರುವ ಮುಬೀನ್ ಖುರೇಶಿ, ನಿರ್ಧಾರ ಬದಲಾಯಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಕ್ರಮ ಮಾಂಸದ ಅಂಗಡಿಗಳು ಹಾಗೂ ಕಸಾಯಿಖಾನೆಗಳನ್ನು ಮುಚ್ಚಿಸುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸೂಚನೆ ನೀಡಿದೆ. ಈ ಆದೇಶದ ಪರಿಣಾಮವಾಗಿ ಉತ್ತರ ಪ್ರದೇಶದ ಪ್ರಸಿದ್ಧ ತುಂಡೇ ಹಾಗೂ ರಹೀಮ್ಸ್ ನಲ್ಲಿ ಸಿಗುತ್ತಿದ್ದ ದನದ ಮಾಂಸ ಭಕ್ಷ್ಯಗಳಿಗೆ ಕತ್ತರಿ ಬಿದ್ದಿದ್ದು, ಅನಿವಾರ್ಯವಾಗಿ ಮಟನ್ ಹಾಗೂ ಚಿಕನ್ ನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.