ನವದೆಹಲಿ: ಪ್ರಸ್ತುತ ಪರಿಸ್ಥಿತಿಯಲ್ಲಿ ಲೋಕಪಾಲ್ ನೇಮಕ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಲೋಕಪಾಲ್ ನೇಮಕ ಮತ್ತು ಜನಲೋಕಪಾಲ್ ಜಾರಿಗೆ ಸಂಬಂಧಿಸಿದಂತೆ ಎನ್ ಜಿಒ ಸಂಘಟನೆಯೊಂದು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಸ್ತುತ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ಪ್ರಸ್ತುತ ಜನ ಲೋಕಪಾಲ್ ಮಸೂದೆ ಸಂಸತ್ ನ ಸದನದ ಮುಂದಿದ್ದು, ಶೀಘ್ರದಲ್ಲೇ ಚರ್ಚೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಲೋಕಪಾಲ್ ನೇಮಕ ಸಾಧ್ಯವಿಲ್ಲ ಎಂದು ಮುಕುಲ್ ರೋಹ್ಟಗಿ ತಮ್ಮ ವಾದ ಮಂಡಿಸಿದ್ದಾರೆ.
ಇನ್ನು ಎನ್ ಜಿಒ ಪರವಾಗಿ ಖ್ಯಾತ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ವಕಾಲತ್ತು ವಹಿಸಿದ್ದು, ಸತತ ಹೋರಾಟಗಳ ಬಳಿಕ ಅಂದರೆ ಮೂರು ವರ್ಷಗಳ ದೇಶದ ನಾಗರೀಕರ ಹೋರಾಟದ ಬಳಿಕ ಜನಲೋಕಪಾಲ್ ಮಸೂದೆಗೆ ಕೇಂದ್ರ ಸರ್ಕಾರ ಒಪ್ಪಿದ್ದು, ಇದೀಗ ಮಸೂದೆಯನ್ನು ಕಾನೂನಾಗಿ ಜಾರಿಗೆ ತರುವ ಕೆಲಸ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಆಧ್ಯ ಕರ್ತವ್ಯವಾಗಿದೆ. ಹೀಗಾಗಿ ಕೂಡಲೇ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಬೇಕು ಎಂದು ಪ್ರಶಾಂತ್ ಭೂಷಣ್ ತಮ್ಮ ವಾದ ಮಂಡಿಸಿದರು.
ಉಭಯ ಪಕ್ಷಗಳ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ವಿಚಾರಣೆಯನ್ನು ಮುಂದೂಡಿದೆ.
ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಮಸೂದೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದಿಟ್ಟು, ಲೋಕಪಾಲ್ ಬಿಲ್ ಗೆ ಅಗತ್ಯ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.