ನವದೆಹಲಿ: ಭಾರತ ವೇಗವಾಗಿ ತಂತ್ರಜ್ಞಾನಗಳ ಅಪ್ಲಿಕೇಶನ್ ಗಳನ್ನು ಒಪ್ಪಿಕೊಳ್ಳುತ್ತಿದ್ದು, ಮೊಬೈಲ್ ವ್ಯಾಲೆಟ್, ಬೈಯೋಮೆಟ್ರಿಕ್ ಮೋಡ್ ಮೂಲಕ ಡಿಜಿಟಲ್ ವಹಿವಾಟುಗಳು ನಡೆಯಲಿದ್ದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳು ಗಣನೀಯವಾಗಿ ಕಣ್ಮರೆಯಾಗಲಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
ಟ್ರೇಡ್-ಇನ್ವೆಸ್ಟ್ ಮೆಂಟ್ ಫೆಸಿಲಿಟೇಷನ್ ಸರ್ವೀಸಸ್ (ಟಿಐಎಫ್ಎಸ್) ನ್ನು ಉದ್ಘಾಟಿಸಿ ಮಾತನಾಡಿರುವ ಸಿಇಒ ಅಮಿತಾಬ್ ಕಾಂತ್, ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದ್ದು, ಮುಂದಿನ 3-4 ವರ್ಷಗಳಲ್ಲಿ ಡಿಜಿಟಲ್ ವಹಿವಾಟು ವ್ಯಾಪಕವಾಗಿ ನಡೆಯಲಿದೆ, ನಂತರ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಕ್ರಮೇಣವಾಗಿ ಕಣ್ಮರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನಾದ್ಯಂತ ಆರ್ಥಿಕ ಬೆಳವಣಿಗೆ ಕ್ಷೀಣಿಸುತ್ತಿದ್ದರೂ ವಾರ್ಷಿಕವಾಗಿ ಭಾರತ ಶೇ.7.6 ರಷ್ಟು ಬೆಳವಣಿಗೆ ಸಾಧಿಸುತ್ತಿದೆ. ಅಮೆರಿಕಾ, ಯುರೋಪ್ ನ ಜನ ಸಂಖ್ಯೆಯಲ್ಲಿ ಬಹುತೇಕ ಜನರು ವೃದ್ಧರಿದ್ದಾರೆ. ಆದರೆ ಭಾರತದ ಜನಸಂಖ್ಯೆ ಮಾತ್ರ ಯುವಕರಿಂದ ಕೂಡಿದೆ ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ.