ದೇಶ

ಅಕ್ರಮ ಆಸ್ತಿ ಪ್ರಕರಣ: ಸಿಎಂ ವೀರಭದ್ರ ಸಿಂಗ್ ವಿರುದ್ಧ ಚಾರ್ಜ್'ಶೀಟ್ ದಾಖಲು

Manjula VN
ನವದೆಹಲಿ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಚಾರ್ಜ್'ಶೀಟ್ ದಾಖಲಿಸಿದೆ. 
ನಿನ್ನೆಯಷ್ಟೇ ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಸಿಂಗ್ ವಿರುದ್ದ ವಿಚಾರಣೆ ಹಾಗೂ ಬಂಧನಕ್ಕೆ ತಡೆ ನೀಡಲು ನಿರಾಕರಿಸಿತ್ತು. ಈ ಮೂಲಕ ಸಿಬಿಐ ಅಧಿಕಾರಿಗಳಿಗೆ ಸುಗಮ ಹಾದಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಸಿಬಿಐ ಸಿಂಗ್ ಅವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ದಾಖಲಿಸಿದೆ. 
2009ರಿಂದ 2011ರವರೆಗೆ ಯುಪಿಎ ಸರ್ಕಾರದಲ್ಲಿ ಉಕ್ಕು ಸಚಿವರಾಗಿದ್ದ ವೇಳೆ ವೀರಭದ್ರ ಸಿಂಗ್ ಅವರು ರೂ.6.1 ಕೋಟಿ ಅಕ್ರಮ ಆಸ್ತಿ ಗಳಿಸಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಪ್ರಕರಣ ಸಂಬಂಧ ಸಿಬಿಐ ಆಧಿಕಾರಿಗಳು ವೀರಭದ್ರ ಸಿಂಗ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೆ, ಎಫ್ಐಆರ್ ಸಂಬಂಧ ಪ್ರಾಥಮಿಕ ತನಿಖೆಗೆ ಹಾಜರಾಗುವಂತೆ 2015ರ ಸೆ.23ರಂದು ಸಮನ್ಸ್ ಜಾರಿ ಮಾಡಿತ್ತು. 
ತಮ್ಮ ಹಾಗು ತಮ್ಮ ಪತ್ನಿಯ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ನ್ನು ವಜಾ ಮಾಡುವಂತೆ ಸಿಂಗ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ತಮ್ಮ ಮನೆ ಮೇಲೆ ದಾಳಿ ನಡೆಯುವ ಮೂಲಕ ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿತ್ತು. ಅಲ್ಲದೆ, ತಮ್ಮ ವಿರುದ್ಧದ ಸಿಬಿಐ ಕ್ರಮವು ರಾಜಕೀಯ ವೈಷಮ್ಯ ಹಾಗೂ ಸೇಡಿನ ಕ್ರಮವಾಗಿತ್ತು ಎಂದು ವಾದಿಸಿದ್ದರು. 
SCROLL FOR NEXT