ರೋಮಿಯೊಗಳ ಸುಧಾರಣೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಾಗಿ ಕಾನೂನು ತಿದ್ದುಪಡಿ: ಮಧ್ಯಪ್ರದೇಶ ಸಿಎಂ
ಉತ್ತರ ಪ್ರದೇಶದ ನಂತರ ಈಗ ರೋಮಿಯೊಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ, ರೋಡ್ ರೋಮಿಯೊಗಳನ್ನು....
ಬೋಪಾಲ್: ಉತ್ತರ ಪ್ರದೇಶದ ನಂತರ ಈಗ ರೋಮಿಯೊಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ, ರೋಡ್ ರೋಮಿಯೊಗಳನ್ನು ಸುಧಾರಿಸುವುದಾಗಿ ಮತ್ತು ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕಾಗಿ ಮಸೂದೆ ಮಂಡಿಸಲು ಮುಂದಾಗಿದೆ.
ರೋಡ್ ರೋಮಿಯೊಗಳಿಗೆ ನಾವು ಪಾಠ ಕಲಿಸುತ್ತೇವೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಅಂತ ಅವರಿಗೆ ಗೊತ್ತಿಲ್ಲ. ನಾಗರಿಕ ಸಾಮಾಜಕ್ಕೆ ಅವರು ಮಾರಕ. ಅವರ ವಿರುದ್ಧ ಆಂದೋಲನ ಆರಂಭಿಸುತ್ತೇವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕಾಗಿ ಅಪರಾಧ ಕಾನೂನಿಗೆ ತಿದ್ದುಪಡಿ ತರಲಾಗುವುದು ಮತ್ತು ಈ ಸಂಬಂಧ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಶೀಘ್ರ ತಿದ್ದುಪಡಿ ಮಸೂದೆ ಮಂಡಿಸುವುದಾಗಿ ಚೌಹ್ವಾಣ್ ತಿಳಿಸಿದ್ದಾರೆ.
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ವಿಧಾಸಭೆಯಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಬಾಲಕಿಯರ ಹಾಸ್ಟೆಲ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.