ನವದೆಹಲಿ: ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪದ ರಿಯಲ್ ಎಸ್ಟೇಟ್ ಸಂಸ್ಥೆ ಯುನಿಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಮತ್ತು ಅವರ ಸೋದರ ಅಜಯ್ ಚಂದ್ರ ಅವರನ್ನು ದೆಹಲಿ ಕೋರ್ಟ್ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಸಂಜಯ್ ಚಂದ್ರ ಹಾಗೂ ಅವರ ಸಹೋದರರನ್ನು ಬಂಧಿಸಿ ಬಳಿಕ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಅಶು ಗರ್ಗ್ ಅವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 3ರವರೆಗೆ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಸಂಜಯ್ ಚಂದ್ರ ಹಾಗೂ ಅಜಯ್ ಚಂದ್ರ ಅವರ ಅಕ್ರಮ ಹಣ ವರ್ಗಾವಣೆ ಮತ್ತು ಗ್ರಾಹಕರಿಗೆ ವಂಚಿಸಿದ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದ್ದು, ಆರೋಪಿಗಳನ್ನು ಮೂರು ದಿನಗಳ ಕಾಲ ನಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ಇದಕ್ಕೆ ಆರೋಪಿಗಳ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಎರಡು ದಿನ ಪೊಲೀಸ್ ವಶಕ್ಕೆ ನೀಡಿದೆ.
ಗ್ರೇಟರ್ ನೋಯ್ಡಾದಲ್ಲಿ ಯುನಿಟೆಕ್ ರಿಯಲ್ ಎಸ್ಟೇಟ್ ಯೋಜನೆಯ ಮೂಲಕ ಒಂದಷ್ಟು ಜನರು ಫ್ಲಾಟ್ ಗಳನ್ನು ಬುಕ್ ಮಾಡಿದ್ದರು. ಆದರೆ ಖರೀದಿಸಿರುವವರಿಗೆ ಫ್ಲಾಟ್ ನ್ನೂ ನೀಡದೇ ಹಣವನ್ನೂ ವಾಪಸ್ ಮಾಡದೇ ಮೋಸ ಮಾಡಿರುವ ಆರೋಪ ಸಂಜಯ್ ಚಂದ್ರ ವಿರುದ್ಧ ಕೇಳಿ ಬಂದಿದ್ದು, ಅಕ್ರಮ ಹಣ ವರ್ಗಾವಣೆಯ ಆರೋಪವೂ ಕೇಳಿ ಬಂದಿದೆ. ಸಂಜಯ್ ಚಂದ್ರ ಇದಕ್ಕೂ ಮುನ್ನ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದರು.