ನವದೆಹಲಿ: ಹಿಂಸಾಚಾರ ಮುಂದುವರೆದಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್ಎನ್ ವೊಹ್ರಾ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
40 ನಿಮಿಷಗಳ ಭೇಟಿಯಲ್ಲಿ ಕಾಶ್ಮೀರದಲ್ಲಿರುವ ಪ್ರಸ್ತುತ ಪರಿಸ್ಥಿತಿ ಹಾಗೂ ಪರಿಸ್ಥಿತಿ ನಿಯಂತ್ರಣ ಕುರಿತಂತೆ ಇಬ್ಬರು ನಾಯಕರು ಮಾತಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆ, ವಿದ್ಯಾರ್ಥಿಗಳು ಹಾಗೂ ಪ್ರತ್ಯೇಕತಾವಾದಿಗಳ ಕಾರ್ಯಕರ್ತರ ಪ್ರತಿಭಟನೆ ಹಾಗೂ ಯೋಧರ ಶಿರಚ್ಛೇದ ಪ್ರಕರಣದ ಕುರಿತಂತೆಯೂ ಮಾತುಕತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಅಲ್ಲದೆ, ಶೀಘ್ರದಲ್ಲೇ ರಾಜ್ಯಪಾಲ ವೊಹ್ರಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಹಿಜ್ಬುಲ್ ಉಗ್ರ ಸಂಘಟನೆಯ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಧೀರ್ಘ ಹಿಂಸಾಚಾರಗಳು ಕಂಡುಬಂದಿದ್ದವು. ನಂತರ ಹರಸಾಹಸಪಟ್ಟು ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ತಂದಿತ್ತು. ಸರ್ಕಾರದ ಎಷ್ಟೇ ಪ್ರಯತ್ನ ನಡೆಸಿದ್ದರೂ, ಕಾಶ್ಮೀರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇತ್ತು. ಆಗಾಗ ವಿದ್ಯಾರ್ಥಿಗಳು ಹಾಗೂ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಲೇ ಇದ್ದರು.
ಇದಾದ ಕೆಲವೇ ದಿನಗಳಲ್ಲಿ ಶ್ರೀನಗರ ಲೋಕಸಭಾ ಚುನಾವಣೆ ನಡೆಸುವುದಾಗಿ ಚುನಾವಣೆ ಆಯೋಗ ಘೋಷಣೆ ಮಾಡಿತ್ತು. ಏಪ್ರಿಲ್ 9 ರಂದು ಲೋಕಸಭಾ ಚುನಾವಣೆ ನಡೆಸಲಾಗಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಕನಿಷ್ಟ 8 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೇ ತಿಂಗಳು 25 ರಂದು ಅನಂತ್ ನಾಗ್ ನಲ್ಲಿ ನಡೆಯಬೇಕಿದ್ದ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗ ರದ್ದು ಮಾಡಿದೆ. ಚುನಾವಣೆ ನಡೆಸಲು ವಾತಾವರಣ ಸರಿಯಿಲ್ಲ ಎಂದು ಹೇಳಿರುವ ಆಯೋಗ ಚುನಾವಣೆಯನ್ನು ರದ್ದು ಮಾಡಿದೆ.