ದೇಶ

ತೀವ್ರಗೊಂಡ ಆಮ್ ಆದ್ಮಿ ಪಕ್ಷದ ಬಿಕ್ಕಟ್ಟು: ಕುಮಾರ್ ವಿಶ್ವಾಸ್-ಕೇಜ್ರಿವಾಲ್ ಭೇಟಿ

Srinivas Rao BV
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್-ಶಾಸಕ ಅಮಾನತುಲ್ಲಾ ಖಾನ್ ನಡುವಿನ ಆರೋಪ ಪ್ರತ್ಯಾರೋಪಗಳು ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಳ್ಳುವಂತೆ ಮಾಡಿದ್ದು, ಕುಮಾರ್ ವಿಶ್ವಾಸ್ ಅವರನ್ನು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದಾರೆ. 
ಮಂಗಳವಾರ ರಾತ್ರಿ ಕುಮಾರ್ ವಿಶ್ವಾಸ್ ಅವರನ್ನು ಭೇಟಿ ಮಾಡಿರುವ ಅರವಿಂದ್ ಕೇಜ್ರಿವಾಲ್, " ಕುಮಾರ್ ವಿಶ್ವಾಸ್ ಬೇಸರಗೊಂಡಿದ್ದಾರೆ. ಆದರೆ ನಾವು ಅವರನ್ನು ಮನವೊಲಿಸುತ್ತೇವೆ. ಕುಮಾರ್ ವಿಶ್ವಾಸ್ ನಮ್ಮ ಚಳುವಳಿಯ ಅವಿಭಾಜ್ಯ ಅಂಗ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಕುಮಾರ್ ವಿಶ್ವಾಸ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಜತೆ ಬಾಂಧವ್ಯ ಹೊಂದಿದ್ದು, ಪಕ್ಷದ ನಾಯಕರು ಇನ್ನೂ ಏಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರ್ ವಿಶ್ವಾಸ್ ತಮ್ಮ ವಿರುದ್ಧದ ಸಂಚಿನಲ್ಲಿ ಅಮಾನತುಲ್ಲಾ ಖಾನ್ ಕೇವಲ ಮುಖವಾಡ ಅಷ್ಟೆ ಎಂದಿದ್ದಾರೆ.
ಅಮಾನತುಲ್ಲಾ ಖಾನ್, ಅರವಿಂದ್ ಕೇಜ್ರಿವಾಲ್ ಅಥವಾ ಮನಿಶ್ ಸಿಸೋಡಿಯಾ ವಿರುದ್ಧ ಈ ರೀತಿ ಹೇಳಿದ್ದರೆ 10 ನಿಮಿಷದಲ್ಲೇ ಪಕ್ಷದಿಂದ ಉಚ್ಚಾಟನೆಯಾಗುತ್ತಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಕುಮಾರ್ ವಿಶ್ವಾಸ್ ವಿರುದ್ಧ ಆರೋಪ ಮಾಡಿದ್ದ ಅಮಾನತುಲ್ಲಾ ಖಾನ್, ಕುಮಾರ್ ವಿಶ್ವಾಸ್ ಆಮ್ ಆದ್ಮಿ ಪಕ್ಷದ ಸಂಚಾಲಕರಾಗಲು ಬಯಸಿದ್ದಾರೆ. ಒಂದು ವೇಳೆ ಆ ಹುದ್ದೆ ಸಿಗದೇ ಇದ್ದಲ್ಲಿ ತಮ್ಮೊಂದಿಗೆ ಕೆಲವು ಆಪ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. 
ಆಮ್ ಆದ್ಮಿ ಪಕ್ಷದ ನಾಯಕರೇ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವ ಕುಮಾರ್ ವಿಶ್ವಾಸ್ ಅವರು, ಶೀಘ್ರದಲ್ಲೇ ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ್ ವಿಶ್ವಾಸ್ ಅವರನ್ನು ಭೇಟಿ ಮಾಡಿರುವ ಅರವಿಂದ್ ಕೇಜ್ರಿವಾಲ್ ಕುಮಾರ್ ವಿಶ್ವಾಸ್ ಮನವೊಲಿಕೆಗೆ ಮುಂದಾಗಿದ್ದಾರೆ. 
SCROLL FOR NEXT