ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ
ನವದೆಹಲಿ: ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಸೇನೆಗೆ ಮುಕ್ತ ಹಸ್ತವನ್ನು ನೀಡಬೇಕೆಂಬ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು, ಭಾರತೀಯ ಯೋಧರು ಹಾಗೂ ಗಡಿ ರಕ್ಷಿಸುವಲ್ಲಿ ಬಿಜೆಪಿ ಅಸಮರ್ಥವಾಗಿದೆ ಎಂದು ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿಯವರು, ಬಿಜೆಪಿ ಸರ್ಕಾರ ಇನ್ನೂ ಮೂರು ವರ್ಷಗಳನ್ನೂ ಕೂಡ ಪೂರೈಸಿಲ್ಲ ಆಗಲೇ ದೇಶದಲ್ಲಿ ಮೂರು ದುರಾದೃಷ್ಟಕರ ಘಟನೆಗಳು ನಡೆದಿವೆ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಗಡಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರ ಮೃತದೇಹಗಳನ್ನೂ ರಕ್ಷಣೆ ಮಾಡುತ್ತಿಲ್ಲ. ದೇಶದ ಕುರಿತು ಬಿಜೆಪಿ ಎಷ್ಟರ ಮಟ್ಟಿಗೆ ಗಂಭೀರತೆಯನ್ನು ತೋರಿದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.
ನಂತರ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿಯವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಯುಪಿಎ ಅಧಿಕಾರದ ಅವಧಿಯಲ್ಲಿ ಕೇವಲ ಒಂದು ಬಾರಿಯಷ್ಟೇ ಈ ರೀತಿ ಘಟನೆ ನಡೆದಿತ್ತು. ನಂತರ ಸರ್ಕಾರ ಕಠಿಣ ಕ್ರಮಕೈಗೊಂಡಿತ್ತು ಎಂದು ತಿಳಿಸಿದ್ದಾರೆ.