ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್
ನವದೆಹಲಿ: ಯೋಧರ ಶಿರಚ್ಛೇದ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಬುಧವಾರ ಆಗ್ರಹಿಸಿದೆ.
ಇಬ್ಬರು ಭಾರತೀಯ ಯೋಧರ ಶಿರಚ್ಛೇದಕ್ಕೆ ಪಾಕಿಸ್ತಾನ ಸೇನಾಪಡೆಯೇ ಜವಾಬ್ದಾರಿಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಬ್ದುಲ್ ಬಸಿತ್ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಅವರು, ಯೋಧರ ಶಿರಚ್ಧೇದಕ್ಕೆ ಭಾರತ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಶಿರಚ್ಛೇದಕ್ಕೆ ಪಾಕಿಸ್ತಾನ ಯೋಧರು ಹಾಗೂ ಕಮಾಂಡರ್ ಗಳು ಹೊಣೆಯಾಗಿದ್ದು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪಾಕಿಸ್ತಾನ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಹೇಳಿದ್ದಾರೆ.
ಸೋಮವಾರ ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಪ್ರಚೋದಿತ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ, ಜಮ್ಮುವಿನಲ್ಲಿ ಇಬ್ಬರು ಯೋಧರ ಅಂಗಾಂಗಗಳನ್ನು ಕತ್ತರಿಸಿ ಪೈಶಾಚಿಕ ಕೃತ್ಯವೆಸಗಿತ್ತು. 22 ಸಿಖ್ ರೆಜಿಮೆಂಟ್‌ನ ಸುಬೇದಾರ್ ಪರಮ್‌ಜಿತ್ ಸಿಂಗ್ ಮತ್ತು ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಪ್ರೇಮ್‌ಸಾಗರ್ ಪಾಕ್ ದಾಳಿಗೆ ಬಲಿಯಾದ ಯೋಧರಾಗಿದ್ದಾರೆ.
ಪಾಕಿಸ್ತಾನ ಈ ವರ್ತನೆಯನ್ನು ಭಾರತ ಕಟು ಶಬ್ಧಗಳಲ್ಲಿ ಖಂಡಿಸಿತ್ತು. ಇದೊಂದು ಪಾಶವೀ ಕೃತ್ಯ ಮತ್ತು ಅಮಾನವೀಯ ನಡುವಳಿಕೆ ಎಂದು ಹೇಳಿತ್ತು.
ಘಟನೆ ನಡೆದ ಬಳಿಕ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ರ ನಡುವೆ ಹಾಟ್ ಲೈನ್ ಮಾತುಕತೆ ನಡೆದಿತ್ತು. ಈ ವೇಳೆ ಭಾರತದ ಆರೋಪವನ್ನು ಪಾಕಿಸ್ತಾನದ ಡಿಜಿಎಂಒ ನಿರಾಕರಿಸಿತ್ತು. ಅಲ್ಲದೆ, ಪಾಕಿಸ್ತಾನ ಯೋಧರು ಭಾರತೀಯ ಯೋಧರ ಶಿರಚ್ಛೇಧ ನಡೆಸಿದ್ದಾರೆ ಎನ್ನುತ್ತಿರುವ ಭಾರತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಣಾಮ ಸಾಕ್ಷಿ ಒದಗಿಸುವಂತೆ ಕೇಳಿತ್ತು.