ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು
ನವದೆಹಲಿ: ದೇಶದ ಜನತೆಗೆ ಶಾಕ್ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿದ್ಧತೆ ನಡೆಸುತ್ತಿದ್ದು, ರಾಷ್ಟ್ರಪತಿ ಹುದ್ದೆಯ ಸ್ಪರ್ಧೆಯಲ್ಲಿ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರ ಹೆಸರು ಇದೀಗ ಬಲವಾಗಿ ಕೇಳಿಬರುತ್ತಿದೆ.
ಬುಡಕಟ್ಟು ಜನಾಂಗಕ್ಕೆ ಸೇರಿದ ಮುರ್ಮು ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಮೂಲಗಳಿ ತಿಳಿಸಿವೆ.
ಒಂದು ವೇಳೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿದ್ದೇ ಆದರೆ, ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಎನ್ನಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರ ಹೆಸರುಗಳು ಬಿಜೆಪಿ ಪಾಳಯದಿಂದ ಬಲವಾಗಿ ಕೇಳಿಬರುತ್ತಿದ್ದವು. ಆದರೆ, ಅವರ ವಿರುದ್ಧ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮರುವಿಚಾರಣೆ ಆರಂಭವಾಗಿದೆ. ಹೀಗಾಗಿ ಬಿಜೆಪಿ ಮಾರ್ಗದರ್ಶದ ಮಂಡಲದ ಈ ಹಿರಿಯರ ಹೆಸರುಗಳು ಈಗ ನೇಪಥ್ಯಕ್ಕೆ ಸರಿದಿವೆ ಎಂದು ವರದಿಗಳು ತಿಳಿಸಿವೆ.
ಮೊದಲು ಬಾರಿ ಆದಿವಾಸಿಯನ್ನು ರಾಷ್ಟ್ರಪತಿ ಮಾಡಿ ಅಚ್ಚರಿಯ ಕೊಡುವೆ ನೀಡುವ ಇರಾದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಗೆ ಇದೆ ಎನ್ನಲಾಗುತ್ತಿದೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2017 ಜು.25ರಂದು ನಿವೃತ್ತರಾಗಲಿದ್ದಾರೆ.
ಬುಡಕಟ್ಟು ಜನಾಂಗದ ನಾಯಕಿಯಾಗಿರುವ ದ್ರೌಪದಿ ಮುರ್ಮು ಅವರು ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ 2015ರ ಮೇ.18ರಂದು ಅಧಿಕಾರವಹಿಸಿಕೊಂಡಿದ್ದರು. ಒಡಿಶಾದಿಂದ ಆಯ್ಕೆಯಾಗಿ ಇವರು 2 ಬಾರಿ ಬಿಜೆಪಿ ಶಾಸಕಿಯಾಗಿದ್ದರು. ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿಯೂ ಇವರು ಕರ್ತವ್ಯ ನಿಭಾಯಿಸಿದ್ದರು.
ಒಡಿಶಾದಲ್ಲಿ ಈ ಹಿಂದೆ ಬಿಜೂ ಜನತಾ ದಳ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರ ಜಾರಿಯಲ್ಲಿದ್ದಾಗ ಮುರ್ಮು ಅವರು ನವೀನ್ ಪಟ್ಟನಾಯಕ್ ಅವರ ಸಂಪುಟದಲ್ಲಿ ಸಚಿವೆಯಾಗಿದ್ದರು. 1997ರಲ್ಲಿ ನಗರ ಸಭಾ ಸದಸ್ಯೆಯಾಗುವ ಮೂಲಕ ದ್ರೌಪದಿ ಮುರ್ಮು ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics