ದೇಶ

ನೋ ಫ್ಲೈ ಲಿಸ್ಟ್ ಕರಡು ನೀತಿ: ಜೀವ ಬೆದರಿಕೆ ಹಾಕುವ ವಿಮಾನ ಪ್ರಯಾಣಿಕರಿಗೆ 2 ವರ್ಷಗಳ ನಿಷೇಧ

Srinivas Rao BV
ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವ ವೇಳೆ ದುರ್ವರ್ತನೆ ತೋರುವ, ಜೀವಬೆದರಿಕೆ ಹಾಕುವ ಪ್ರಯಾಣಿಕರಿಗೆ ವಿಮಾನಯಾನ ಮಾಡುವುದರಿಂದ ಎರಡು ವರ್ಷ ನಿಷೇಧ ವಿಧಿಸುವುದಕ್ಕೆ ಭಾರತದ ಮೊದಲ ನೋ ಫ್ಲೈ ಲಿಸ್ಟ್ ನ ಕರಡು ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. 
ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್ ಎನ್ ಚೌಬಿ ನಾಗರಿಕ ವಿಮಾನಯಾನದ ಹೊಸ ನೀತಿಗಳನ್ನು ಘೋಷಿಸಿದ್ದಾರೆ. ಶಿವಸೇನೆ ಸಂಸದ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ದುರ್ವರ್ತನೆ ತೋರಿದ ಪ್ರಕರಣ ನಡೆದ ನಂತರ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳು ನೋ-ಫ್ಲೈ ಲಿಸ್ಟ್ (ದುರ್ವರ್ತನೆ ತೋರುವ ಪ್ರಯಾಣಿಕರಿಗೆ ವಿಮಾನದಲ್ಲಿ ಸಂಚರಿಸಲು ನಿಷೇಧ)ಗಾಗಿ ಆಗ್ರಹಿಸಿದ್ದವು. 
ದುರ್ವರ್ತನೆಯನ್ನು 3 ವಿಭಾಗಗಳನ್ನಾಗಿ ಮಾಡಲಾಗಿದ್ದು, ಮೊದಲನೆಯದ್ದು ಕಾರ್ಯಾಚರಣೆಗೆ ಅಡಚಣೆ ಉಂಟು ಮಾಡುವುದಾಗಿದ್ದರೆ,  ದೈಹಿಕ ಹಲ್ಲೆ ಲೈಂಗಿಕ ಕಿರುಕುಳ ನಡೆಸುವುದು ಎರಡನೆಯ ವಿಭಾಗ, ಹಾಗೂ ಜೀವ ಬೆದರಿಕೆ ಹಾಕುವುದನ್ನು ನೋ-ಫ್ಲೈ ಲಿಸ್ಟ್ ನ 3 ನೆಯ ಭಾಗವನ್ನಾಗಿ ಮಾಡಲಾಗಿದೆ ಎಂದು ಚೌಬಿ ಹೇಳಿದ್ದಾರೆ. 
ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದರೆ ಮೂರು ತಿಂಗಳು ವಿಮಾನ ಹತ್ತದಂತೆ ನಿಷೇಧ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ ನೀಡಿದರೆ 6 ತಿಂಗಳ ನಿಷೇಧ, ಜೀವ ಬೆದರಿಕೆ ಹಾಕುವ ವಿಮಾನ ಪ್ರಯಾಣಿಕರಿಗೆ 2 ವರ್ಷಗಳ ನಿಷೇಧ ವಿಧಿಸುವುದಕ್ಕೆ ಹೊಸ ನೀತಿಯಲ್ಲಿ ಶಿಫಾರಸಸ್ಸು ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳು ಇದೇ ನಿಯಮಗಳನ್ನು ಅನ್ವಯಿಸಿಕೊಳ್ಳಲು ಅವಕಾಶವಿದೆ ಎಂದು ಚೌಬಿ ತಿಳಿಸಿದ್ದಾರೆ. 
SCROLL FOR NEXT