ಉತ್ತರ ಪ್ರದೇಶ ಪೊಲೀಸರಿಂದ ವ್ಯಕ್ತಿ ಬಳಿ ಇದ್ದ 7.5 ಕೋಟಿ ರು. ನಗದು ಜಪ್ತಿ
ಉತ್ತರ ಪ್ರದೇಶ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನ ಬಳಿ ಇದ್ದ 7.5 ಕೋಟಿ ರುಪಾಯಿ ನಗದು ಜಪ್ತಿ ಮಾಡಿ...
ಲಖನೌ: ಉತ್ತರ ಪ್ರದೇಶ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನ ಬಳಿ ಇದ್ದ 7.5 ಕೋಟಿ ರುಪಾಯಿ ನಗದು ಜಪ್ತಿ ಮಾಡಿ, ಆರೋಪಿಯನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ದಲಿಗಂಜ್ ರೈಲ್ವೆ ಕ್ರಾಸಿಂಗ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವಾಹನದಲ್ಲಿ ದಾಖಲೆ ಇಲ್ಲದ ಭಾರಿ ಮೊತ್ತದ ನಗದು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ನಗದು ಜಪ್ತಿ ಮಾಡಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ 500 ಹಾಗೂ 2, 000 ಮುಖ ಬೆಲೆಯ 7.5 ಕೋಟಿ ರುಪಾಯಿ ಮೌಲ್ಯದ ನೋಟುಗಳನ್ನು ಸಾಗಿಸುತ್ತಿದ್ದ ಶಿವಶಂಕರ್ ತಿವಾರಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಹಣ ತನ್ನ ಫಾರ್ಮ್ ಗೆ ಸೇರಿದ್ದು ಎಂದು ತಿವಾರಿ ಹೇಳಿದ್ದಾರೆ. ಆದರೆ ಆ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ ಎಂದು ಕುಮಾರ್ ಹೇಳಿದ್ದಾರೆ.