ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಅವರು ಮಾಡುತ್ತಿರುವ ಆರೋಪವನ್ನು ಆಮ್ ಆದ್ಮಿ ಪಕ್ಷ ತಳ್ಳಿಹಾಕಿದ್ದು, ಆರೋಪ ಆಧಾರ ರಹಿತವಾದದ್ದು ಎಂದು ಭಾನುವಾರ ಹೇಳಿದೆ.
ಕಪಿಲ್ ಮಿಶ್ರಾ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ಆರೋಪ ಕುರಿತಂತೆ ಹೇಳುವುದಕ್ಕೆ ಏನೂ ಇಲ್ಲ. ಆರೋಪವೊಂದು ಆಧಾರ ರಹಿತವಾದದ್ದು. ಉತ್ತರ ನೀಡುವಂತಹ ವಿಷಯವಲ್ಲ. ಇಂತಹ ಆರೋಪವನ್ನು ಯಾರೂ ನಂಬುವುದೂ ಇಲ್ಲ ಎಂದು ಹೇಳಿದ್ದಾರೆ.
ಸಂಪುಟದಿಂದ ಕೈಬಿಟ್ಟ ಬಳಿಕ ಕೇಜ್ರಿವಾಲ್ ವಿರುದ್ಧ ಬಂಡಾಯವೆದ್ದಿದ್ದ ಕಪಿಲ್ ಮಿಶ್ರಾ ಅವರು, ಹೊಸ ಬಾಂಬ್ ವೊಂದನ್ನು ಸಿಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೊತೆಗೆ ಸತ್ಯೇಂದರ್ ಜೈನ್ ಅವರು ರೂ.50 ಕೋಟಿ ಭೂ ಒಪ್ಪಂದ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಅವರು ಕೇಜ್ರಿವಾಲ್ ಅವರಿಗೆ ನಗದು ರೂಪದಲ್ಲಿ ರೂ.2 ಕೋಟಿಯನ್ನು ನೀಡಿದ್ದರು. ಈ ಹಣದ ಬಗ್ಗೆ ಕೇಜ್ರಿವಾಲ್ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಕೇಜ್ರಿವಾಲ್ ಹಣ ಪಡೆದಿದ್ದನ್ನು ನಾನೇ ನನ್ನ ಕಣ್ಣಿನಿಂದ ನೋಡಿದ್ದೇನೆಂದು ಆರೋಪಿಸಿದ್ದರು.