ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನಿತಾ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಮೇಲೆ ಮಾಡುತ್ತಿರುವ ಆರೋಪಗಳಿಂದ ತೀವ್ರವಾಗಿ ಬೇಸತ್ತಿರುವ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು ಇದೀಗ ತಮ್ಮ ಪತಿಯ ಬೆಂಬಲಕ್ಕೆ ಧಾವಿಸಿದ್ದಾರೆ.
ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಒಬ್ಬ'ಮೂರ್ಖ' ಎಂದು ಸುನಿತಾ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಅವರು ಮಾಡುತ್ತಿರುವ ಗಂಭೀರ ಆರೋಪ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ಅವರು, ನನ್ನ ಮೈದುನ ಸುರೇಂದ್ರ ಕುಮಾರ್ ಬನ್ಸಾಲ್ ಅವರು ನಿಧನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಮೂರ್ಖ ಮನುಷ್ಯ (ಕಪಿಲ್ ಮಿಶ್ರಾ) ಸಿದ್ಧಗೊಂಡ ಆರೋಪವನ್ನು ವಿವೇಚನೆ ಇಲ್ಲದೆಯೇ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾನೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಅವರು ತಮ್ಮ ಭಾವನಿಗಾಗಿ ರೂ.50 ಕೋಟಿ ಮೌಲ್ಯದ ಭೂಹಗರಣ ಮಾಡಿದ್ದಾರೆ. ಇದಕ್ಕಾಗಿ ಡೀಲ್ ಕುದುರಿಸಿದ್ದು ಸಚಿವ ಸತ್ಯೇಂದ್ರ ಜೈನ್. ಛತರ್ ಪುರದಲ್ಲಿ ಕೇಜ್ರಿವಾಲ್ ಅವರ ಭಾವ ಬನ್ಸಲ್ ಅವರಿಗಾಗಿ 7 ಎಕರೆ ಲ್ಯಾಂಡ್ ಡೀಲ್ ಮಾಡುತ್ತಿದ್ದೇನೆಂದು ಜೈನ್ ನನಗೆ ಹೇಳಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೈನ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ರೂ.10 ಕೋಟಿ ನಕಲಿ ಬಿಲ್ ಸೃಷ್ಟಿಸಿದ್ದರು ಎಂದು ಕಪಿಲ್ ಮಿಶ್ರಾ ಈ ಹಿಂದೆ ಆರೋಪಿಸಿದ್ದರು.