ಪುಣೆ: 2009ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ನಯನಾ ಪಾಠಕ್-ಪೂಜಾರಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂರು ಅಪರಾಧಿಗಳಿಗೆ ತ್ವರಿತ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಎಲ್.ಎಲ್.ಯೆಂಕಾರ್ ನಿನ್ನೆ ತೀರ್ಪು ನೀಡಿ ಯೋಗೇಶ್ ಅಶೋಕ್ ರಾವತ್, ಮಹೇಶ್ ಬಾಳಸಾಹೇಬ್ ಠಾಕೂರ್ ಮತ್ತು ವಿಶ್ವಾಸ್ ಹಿಂದೂ ರಾವ್ ಕದಮ್ ಅವರನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದರು. ಇವರು ನಯನಾ ಅವರನ್ನು 2009ರಲ್ಲಿ ಅಪಹರಿಸಿ ದರೋಡೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದರು. ನಿನ್ನೆ ಇಡೀ ದಿನ ಕಾನೂನು ಮತ್ತು ರಕ್ಷಣಾ ವಕೀಲರ ವಾದ ವಿವಾದ ಆಲಿಸಿದ ನ್ಯಾಯಾಧೀಶರು ಮರಣದಂಡನೆ ತೀರ್ಪು ನೀಡಿದ್ದಾರೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹರ್ಷದ್ ನಿಂಬಾಳ್ಕರ್ ವಾದ ಮಂಡಿಸಿ, ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದ್ದು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಇದೊಂದು ಘೋರ ಹೀನಾಯ ಕೃತ್ಯವಾಗಿದ್ದು ಇದಕ್ಕೆ ಅತ್ಯುಗ್ರ ಶಿಕ್ಷೆ ನೀಡಬೇಕೆಂದು ವಾದಿಸಿದ್ದರು.
ಮತ್ತೊಬ್ಬ ಸಹ ಆರೋಪಿ ರಾಜೇಶ್ ಪಾಂಡುರಂಗ ಚೌಧರಿ, ಸಹೋದ್ಯೋಗಿ ಎಂದು ಪೊಲೀಸರು ಬಂಧಿಸಿದ್ದು, ನಂತರ ಅನುಮೋದಕ ಎಂದು ತೀರ್ಪು ನೀಡಿ ಕ್ಷಮೆ ನೀಡಲಾಯಿತು.
ನಯನಾ ಅವರ ಪತಿ ಅಭಿಜಿತ್ ಪೂಜಾರಿ, ಸಹೋದರಿಯರಾದ ಮನಿಶಾ ಜಿ ಮತ್ತು ಮಾಧುರಿ ಜೆ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಗೆ ಒತ್ತಾಯಪಡಿಸಿದ್ದರು. ಅದರಂತೆ ತೀರ್ಪು ಬಂದಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ನಯನಾ ಪೂಜಾರಿ ಪುಣೆಯ ಖಾರಾಡಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2009, ಅಕ್ಟೋಬರ್ 7ರಂದು ಅಪಹರಿಸಲ್ಪಟ್ಟಿದ್ದರು. ಅಕ್ಟೋಬರ್ 9ರಂದು ಖೇಡ್ ತಾಲ್ಲೂಕಿನ ಝರೆವಾಡಿ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಸಿಕ್ಕಿತ್ತು. ಆಕೆಯನ್ನು ಕಾರಿನಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಎಟಿಎಂ ಕಸಿದುಕೊಂಡು ಹಣ ಕಿತ್ತು ಹತ್ಯೆಗೈದು ನಾಲ್ವರು ಪರಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics