ನವದೆಹಲಿ: ನ್ಯಾಯಾಂಗ ನಿಂದನೆ ಆರೋಪದಡಿ ಸಾಲದ ದೊರೆ ವಿಜಯ್ ಮಲ್ಯ ಅವರು ದೋಷಿಯಾಗಿದ್ದು, ಜುಲೈ.10ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮಲ್ಯಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಬ್ರಿಟನ್ ಸಂಸ್ಥೆಯಿಂದ ಬಂದ 40 ದಶಲಕ್ಷ ಡಾಲರ್ ಗಳನ್ನು ಮಕ್ಕಳ ಹೆಸರಿಗೆ ವರ್ಗ ಮಾಡಿರುವ ವಿಜಯ್ ಮಲ್ಯ ಅವರ ಕ್ರಮದಿಂದಾಗಿ ನ್ಯಾಯಾಂಗ ನಿಂದನೆಯಾಗಿದ್ದು, ಶಿಕ್ಷೆ ಕುರಿತಂತೆ ಜುಲೈ10 ರಂದು ನಡೆಯಲಿರುವ ವಿಚಾರಣಾ ದಿನದಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಪೀಠ ಮಲ್ಯ ಅವರಿಗೆ ಆದೇಶಿಸಿದೆ.
ಹಣದ ವರ್ಗಾವಣೆಗೆ ನ್ಯಾಯಾಲಯ ನಿಷೇಧ ಹೇರಿದ್ದರೂ ಬ್ರಿಟನ್'ನ ಡಿಯಾ ಜಿಯೋ ಸಂಸ್ಥೆಯಿಂದ ಮಲ್ಯ ಅವರಿಗೆ ಬಂದ 40 ದಶಲಕ್ಷ ಡಾಲರ್ ಗಳನ್ನು ತಮ್ಮ ಮೂವರು ಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು.
ಭಾರತದ ವಿವಿಧ ಬ್ಯಾಂಕ್ ಗಳಿಗೆ ರೂ.9,400 ಕೋಟಿ ಸಾಲ ಮರು ಪಾವತಿಸದೆ ವಂಚಿಸಿರುವ ಮಲ್ಯ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿದ್ದಾರೆ. ತಮ್ಮ ಆಸ್ತಿ ಕುರಿತು ತಪ್ಪು ಮಾಹಿತಿ ನೀಡಿರುವ ಮಲ್ಯ ನ್ಯಾಯಾಲಯದ ಹಾದಿ ತಪ್ಪಿಸಿದ್ದಾರೆ. ಹೀಗಾಗಿ ಮಲ್ಯ ವಿರುದ್ದ ನ್ಯಾಯಾಲಯ ಧಿಕ್ಕಾರ ಆರೋಪದಡಿ ಶಿಕ್ಷಿಸಬೇಕೆಂದು ಬ್ಯಾಂಕ್ ಗಳ ಒಕ್ಕೂಟ ಈ ಹಿಂದೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಇಂದು ಸುಪ್ರೀಂಕೋರಟ್ ವಿಚಾರಣೆ ನಡೆಸಿದ್ದು, ನ್ಯಾಯಾಂಗ ನಿಂದನೆ ಆರೋಪದಡಿ ಸಾಲದ ದೊರೆ ವಿಜಯ್ ಮಲ್ಯ ಅವರು ದೋಷಿಯಾಗಿದ್ದಾರೆಂದು ಹೇಳಿದೆ. ಅಲ್ಲದೆ, ಜುಲೈ10 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ.
ಸಾಲ ಪ್ರಕರಣಗಳ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ಎದುರಿಸುತ್ತಿರುವ ವಿಜಯ್ ಮಲ್ಯ ಅವರು ಒಂದು ವೇಳೆ ಭಾರತಕ್ಕೆ ಮರಳಿ ಬಂದಿದ್ದೇ ಆದರೆ, ಈ ಪ್ರಕರಣಗಳಲ್ಲಿ 6 ತಿಂಗಳು ಜೈಲು ಶಿಕ್ಷೆ ಜೊತೆಗೆ ದಂಡವನ್ನು ತೆರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮಲ್ಯ ಅವರು ಲಂಡನ್ ನಲ್ಲಿಯೇ ವಾಸವಿದ್ದು, ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಬ್ರಿಟನ್ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಮೊದಲೇ ತಿಳಿದಿದ್ದ ಮಲ್ಯ ಅವರು, 2016ರ ಮಾರ್ಚ್ ತಿಂಗಳಿನಲ್ಲಿ ಲಂಡನ್'ಗೆ ಪಲಾಯನವಾಗಿದ್ದರು.
ಇದಾದ ಬಳಿಕ ಬ್ಯಾಂಕ್ ಗಳು ನ್ಯಾಯಾಲಯದ ಮೊರೆ ಹೋಗಿದ್ದವು. ನ್ಯಾಯಾಲಯ ಹಲವು ಬಾರಿ ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಮಲ್ಯ ಅವರಿಗೆ ಸೂಚನೆ ನೀಡಿದ್ದರೂ, ಮಲ್ಯ ಮಾತ್ರ ಇದಾವುದನ್ನೂ ಮಾನ್ಯ ಮಾಡಿಲ್ಲ. ಹಲವಾರು ಬಾರಿ ವಿಚಾರಣೆ ಹಾಜರಾಗುವಂತೆ ದಿನಾಂಕ ನಿಗದಿ ಮಾಡಿದ್ದರು ನ್ಯಾಯಾಲಯಕ್ಕೆ ಹಾಜರಾಗಲು ವಿಫರಾಗುವುದರ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆಂದು ನ್ಯಾಯಾಲಯ ತಿಳಿಸಿತ್ತು.
ಇನ್ನು ಬ್ರಿಟನ್ ನಲ್ಲೂ ಮಲ್ಯ ಪ್ರಕರಣಗಳನ್ನು ಎದುರಿಸುತ್ತಿದ್ದು, ಕಳೆದ ತಿಂಗಳಷ್ಟೇ ಮಲ್ಯ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧನಕ್ಕೊಳಗಾದ ಕೆಲವೇ ನಿಮಿಷಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos