ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) 400 ಕೋಟಿಯ ನೀರಿನ ಟ್ಯಾಂಕರ್ ಹಗರಣದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದ ವಜಾಗೊಂಡ ದೆಹಲಿ ಮಾಜಿ ಸಚಿವ ಕಪಿಲ್ ಮಿಶ್ರಾ ಅವರ ಹೇಳಿಕೆಯನ್ನು ಗುರುವಾರ ದಾಖಲಿಸಿಕೊಂಡಿದೆ.
ಇಂದು ಮಧ್ಯಾಹ್ನ ಎಸಿಬಿ ಕಚೇರಿಗೆ ಆಗಮಿಸಿದ ಕಪಿಲ್ ಮಿಶ್ರಾ ಅವರ ಹೇಳಿಕೆಯನ್ನು ಎಸಿಬಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಎಸಿಬಿ ಕಚೇರಿಗೆ ಭೇಟಿ ನೀಡಿದ್ದ ಕಪಿಲ್ ಮಿಶ್ರಾ ಅವರು, 400 ಕೋಟಿ ರುಪಾಯಿ ನೀರಿನ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ವಿರುದ್ಧ ದಾಖಲೆಗಳನ್ನು ಸಲ್ಲಿಸಿದ್ದರು.
ದೆಹಲಿ ಮುಖ್ಯಮಂತ್ರಿ ಹಾಗೂ ಅವರ ಇಬ್ಬರು ವ್ಯಕ್ತಿಗಳು ಟ್ಯಾಂಕರ್ ಹಗರಣ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿಯೇ ಹಗರಣದ ತನಿಖೆ ವಿಳಂಬವಾಗುತ್ತಿದೆ ಎಂದು ಕಪಿಲ್ ಮಿಶ್ರಾ ಅವರು ಆರೋಪಿಸಿದ್ದರು.
ಈ ಹಿಂದೆ ಟ್ಯಾಂಕರ್ ಹಗರಣದ ಆರೋಪಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಮಿಶ್ರಾ ಆರೋಪಿಸಿದ್ದರು. ಈಗ ಎಎಪಿ ಸರ್ಕಾರ ಶೀಲಾ ದಿಕ್ಷಿತ್ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.