ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
ಲಖನೌ: ಗುಜರಾತ್ ರಾಜ್ಯದ ಯೋಧರೇಕೆ ಹುತಾತ್ಮರಾಗಿಲ್ಲ ಎಂಬ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ಗುರುವಾರ ಕಿಡಿಕಾರಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ನಳಿನ್ ಕೊಹ್ಲಿಯವರು, ಅಖಿಲೇಶ್ ಅವರ ಸಣ್ಣತನದ ಹೇಳಿಕೆಯನ್ನು ನೀಡಿದ್ದು, ಇದು ನಿಜಕ್ಕೂ ದುರಾದೃಷ್ಟಕರ. ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಅಖಿಲೇಶ್ ಅವರು ಈಗಲೂ ಖಿನ್ನತೆ ಅಥವಾ ಆಘಾತದಲ್ಲಿಯೇ ಇದ್ದಾರೆಂದು ಎನಿಸುತ್ತಿದೆ. ದೇಶಕ್ಕಾಗಿ ಯೋಧರು ಪಡುತ್ತಿರುವ ಶ್ರಮ ಹಾಗೂ ಶೂರತೆಯನ್ನು ಧಾರ್ಮಿಕ ಸಾಲಿನಲ್ಲಿ ನಿಲ್ಲಿಸಿ ಒಡೆಯುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಮೋದಿಯವರನ್ನು ಟೀಕಿಸು ಭರದಲ್ಲಿ ಅಖಿಲೇಶ್ ಯಾದವ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಉತ್ತರಪ್ರದೇಶ, ಮಧ್ಯಪ್ರದೇಶ, ದಕ್ಷಿಣ ಭಾರತ ಮತ್ತು ಭಾರತದ ಇತರೆ ರಾಜ್ಯಗಳ ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಗುಜರಾತ್ ರಾಜ್ಯದ ಯಾವೊಬ್ಬ ಯೋಧನಾದರೂ ಹುತಾತ್ಮನಾಗಿದ್ದಾನೆಯೇ ಹೇಳಿ... ಎಂದು ಪ್ರಶ್ನಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಸಂತುಲನ ಕಳೆದುಕೊಂಡಂತೆ ಕಂಡು ಬಂದ ಅಖಿಲೇಶ್ ಅವರು ಮೋದಿ ಅವರ ತವರು ರಾಜ್ಯವಾದ ಗುಜರಾತ್ ಕೊಡುಗೆ ಪ್ರಶ್ನಿಸುವಾಗ ಈ ಅವಾಂತರ ಸೃಷ್ಟಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics