ಶ್ರೀನಗರ: ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಅಪಹರಿಸಿ, ಭೀಕರವಾಗಿ ಹತ್ಯೆ ಮಾಡಿದ ಉಗ್ರರ ಕ್ರೌರ್ಯವನ್ನು ಭಾರತೀಯ ಸೇನೆ ತೀವ್ರವಾಗಿ ಖಂಡಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಸೇನಾ ನೆಲೆಗಳ ಮೇಲೆ ಹಾಗೂ ಠಾಣೆಗಳ ಮೇಲೆ ದಾಳಿ ನಡೆಸುತ್ತಿದ್ದ ಉಗ್ರರು ಸೇನಾಧಿಕಾರಿಯೊಬ್ಬರನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡುವ ಮೂಲಕ ಕ್ರೌರ್ಯವನ್ನು ಮರೆದಿತ್ತು.
ಶೋಪಿಯಾನ್ ಜಿಲ್ಲೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ಉಮರ್ ಫಯಾಜ್ ಹೋಗಿದ್ದರು. ಈ ವೇಳೆ ಮದುವೆ ಮನೆಗೆ ನುಗ್ಗಿರುವ ಶಸ್ತ್ರಾಸ್ತ್ರಧಾರಿ ಉಗ್ರರ ಗುಂಪೊಂದು ಬೆದರಿಸಿ ಫಯಾಜ್ ಅವರನ್ನು ಅಪಹರಿಸಿತ್ತು. ನಿನ್ನೆಯಷ್ಟೇ ಫಯಾಜ್ ಅವರ ಮೃತದೇಹ ಬಸ್ ನಿಲ್ದಾಣವೊಂದರಲ್ಲಿ ದೊರಕಿತ್ತು.
ಫಯಾಜ್ ಅವರನ್ನು ಅಪಹರಿಸಿದ್ದ ಉಗ್ರರ ಗುಂಪು ಅವರ ತಲೆಗೆ ಹಾಗೂ ಎದೆಗೆ ಹತ್ತಿರದಿಂದಲೇ ಗುಂಡು ಹಾಕಿಸಿ ಹತ್ಯೆ ಮಾಡಿದೆ. ಬಹಳ ಹತ್ತಿರದಿಂದಲೇ ಗುಂಡು ಹಾರಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ.
ಉಗ್ರರ ಈ ಕ್ರೌರ್ಯಕ್ಕೆ ಭಾರತೀಯ ಸೇನೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದು, ಸೇನಾಧಿಕಾರಿಯನ್ನು ಹತ್ಯೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದೆ.
ಈ ಕುರಿತಂತೆ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ ಅಭಯ್ ಕೃಷ್ಣ ಅವರು, ಹೇಡಿತನದ ವರ್ತನೆ ಹಾಗೂ ದುಷ್ಕೃತ್ಯವೆಸಗಿರುವವರಿಗೆ ಶೀಘ್ರದಲ್ಲಿಯೇ ತಿರುಗೇಟು ನೀಡುತ್ತೇವೆ. ತಮ್ಮ ಮಗನನ್ನು ಕಳೆದುಕೊಳ್ಳುವಿಕೆಯನ್ನು ಕಾಶ್ಮೀರ ಎಂದಿಗು ಸಹಿಸಿಕೊಳ್ಳುವುದಿಲ್ಲ. ಇದೊಂದು ಹೇಡಿತನ ಕೃತ್ಯವಾಗಿದ್ದು, ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ. ಹುತಾತ್ಮ ಯೋಧನ ಕುಟುಂಬಸ್ಥರೊಂದಿಗೆ ಇಡೀ ಸೇನೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಹೇಳಿದ್ದಾರೆ.
ಮೂಲತಃ ಕಾಶ್ಮೀರದ ಕುಲ್ಗಾಂ ಜಿಲ್ಲೆಯವರಾದ ಫಯಾಜ್ ಅವರು, ರಜಪೂತಾನಾ ರೈಫಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಮ್ಮುವಿನ ಅಖ್ನೂರ್ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಷ್ಟೇ ಅವರು ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.
ಮೊದಲ ರಜೆಯೇ ಕೊನೆಯ ರಜೆಯಾಗಿ ಹೋಯ್ತು
ಡಿಸೆಂಬರ್ ತಿಂಗಳಿನಲ್ಲಷ್ಟೇ ರಜಪೂತಾನಾ ರೈಫಲ್ಸ್ ಗೆ ನಿಯೋಜಿತರಾಗಿದ್ದ ಉಮರ್ ಫಯಾಜ್ ಅವರು ಪುಣೆ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದರು. ಸೇನೆ ಸೇರಿದ ನಂತರ ಇದೇ ಮೊದಲ ಬಾರಿಗೆ ಸಂಬಂಧಿಕರೊಬ್ಬರ ಮದುವೆಗೆಂದು ರಜೆ ಪಡೆದಿದ್ದರು. ಆದರೆ, ಇದೇ ಅವರ ಕೊನೆಯ ರಜೆಯಾಗಿದ್ದು ವಿಪರ್ಯಾಸ.