ಪಶ್ಚಿಮ ಬಂಗಾಳ ಮುಖ್ಯಂತ್ರಿ ಮಮತಾ ಬ್ಯಾನರ್ಜಿ
ನವದೆಹಲಿ: ಭಾರತದಲ್ಲಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಂತ್ರಿ ಮಮತಾ ಬ್ಯಾನರ್ಜಿಯವರು ಗುರುವಾರ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಮತಾ ಬ್ಯಾನರ್ಜಿಯವರ ಕುರಿತಂತೆ ಬಿಜೆಪಿ ಮುಖಂಡ ಶ್ಯಾಮಪದ ಮೊಂಡಲ್ ಅವರು ನೀಡಿದ್ದ ಕೀಳುಮಟ್ಟದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಮತಾ ಅವರು, ಬಿಜೆಪಿ ನಾಯಕರನ್ನು ಖಂಡಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ದೇಶದಲ್ಲಿಂದು ಅಸಹಿಷ್ಣುತೆ ಮತ್ತು ಒಡಕು ರಾಜಕೀಯ ತಾಂಡವವಾಡುತ್ತಿದ್ದು, ಬೆದರಿಕೆಗಳಿಗೆ ನಾವು ಮೌನವಹಿಸಬಾರದು. ದೇಶವನ್ನು ಪಶ್ಚಿಮ ಬಂಗಾಳ ಮಾತ್ರ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಭಾರತದಲ್ಲಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಅಸಹಿಷ್ಣುತೆ ಹಾಗೂ ಒಡಕು ರಾಜಕೀಯದ ವಿರುದ್ಧ ಎಲ್ಲಾ ರಾಜ್ಯಗಳು ಮೌನವಹಿಸಬಹುದು. ಆದರೆ, ಪಶ್ಚಿಮ ಬಂಗಾಳ ಮಾತ್ರ ಸುಮ್ಮನೆ ಕೂರುವುದಿಲ್ಲ. ದೆಹಲಿಯಲ್ಲಿ ಎಷ್ಟೇ ಭೀತಿ ಸೃಷ್ಟಿಸಿದರೂ ನಾವು ನಮ್ಮ ದನಿಯನ್ನು ಎತ್ತುತ್ತೇವೆಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರ ಬೆದರಿಕೆ ತಂತ್ರಗಳು ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ. ಬಿಹಾರ, ಮಹಾರಾಷ್ಟ್ರಗಳಂತಹ ರಾಜ್ಯಗಳು ಮೌನವಾಗಿರಬಹುದು ಆದರೆ, ಪಶ್ಚಿಮ ಬಂಗಾಳ ಮಾತ್ರ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಎಂತಹದ್ದೇ ಪರಿಸ್ಥಿತಿ ಬಂದರೂ ದೇಶ ರಕ್ಷಿಸಲು ಕೋಮವಾದಿ ರಾಜಕೀಯ, ಅಸಹಿಷ್ಣುತೆ ವಿರುದ್ಧ ಪಶ್ಚಿಮ ಬಂಗಾಳ ಹೋರಾಡಲಿದೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನನ್ನು ನಪುಂಸಕ ಎಂದು ಕರೆಯಲಾಗಿದೆ. ನನಗೆ ನ್ಯಾಯಬೇಕು. ಇದು ನಿಜಕ್ಕೂ ನಾಚಿಕೆಗೇಡು. ನಾನು ಬಹಳ ಕೆಟ್ಟ ವ್ಯಕ್ತಿಯೇ ಇರಬಹುದು. ಆದರೆ, ದೇಶದಲ್ಲಿ ಗೌರವಯುತ ಜೀವನ ನಡೆಸಲು ನನಗೆ ಹಕ್ಕಿದೆ. ಜನರಿಂದ ನನಗೆ ನ್ಯಾಯಬೇಕಿದೆ ಎಂದಿದ್ದಾರೆ.
ಏಪ್ರಿಲ್30 ರಂದು ಮೇದಿನಿಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ಯಾಮಪದ ಮೊಂಡಲ್ ಅವರು, ಮಮತಾ ಬ್ಯಾನರ್ಜಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಣ್ಣು ಅಲ್ಲ, ಗಂಡು ಅಲ್ಲ, ನಪುಂಸಕ(ಹಿಜ್ರಾ) ಎಂದು ಜರಿದಿದ್ದರು. ಹೇಳಿಕೆ ಸಂಬಂಧ ಮೊಂಡಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.