ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹತ್ಯೆ ಮಾಡುವಾಗ ಕಾಶ್ಮೀರಿಗರೇ ಅಥವಾ ಕಾಶ್ಮೀರಿಗರಲ್ಲವೇ ಎಂಬುದನ್ನು ನೋಡುವುದಿಲ್ಲ. ಯಾರನ್ನೂ ಬೇಕಾದರೂ ಅವರು ಹತ್ಯೆ ಮಾಡುತ್ತಾರೆಂದು ರಕ್ಷಣಾ ತಜ್ಞರು ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
ಯುವ ಸೇನಾಧಿಕಾರಿ ಉಮರ್ ಫಯಾಜ್ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರೆ ಉಗ್ರ ಸಂಘಟನೆಗಳು ತಮ್ಮ ಶತ್ರುಗಳು ಎಂಬುದನ್ನು ಜಮ್ಮು ಮತ್ತು ಕಾಶ್ಮೀರ ಜನತೆ ಮನವರಿಕೆ ಮಾಡಿಕೊಳ್ಳಬೇಕಿದೆ. ಉಗ್ರರು ಹತ್ಯೆ ಮಾಡುವಾಗ ಕಾಶ್ಮೀರಿಗರೇ, ಅಲ್ಲವೇ ಎಂಬುದನ್ನು ಪರಿಶೀಲಿಸುವುದಿಲ್ಲ. ಕೊಲ್ಲುವುದಷ್ಟೇ ಅವರ ಉದ್ದೇಶವಾಗಿರುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿರುವ ಸ್ಥಳೀಯ ಜನರು ಈಗಲಾದರೂ ಕಣ್ಣುತೆರೆದು ನೋಡಬೇಕು. ಉಗ್ರರಿಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ಹೋಗಿದ್ದ ವೇಳೆ ಮದುವೆ ಮನೆಗೆ ನುಗ್ಗಿದ್ದ ಶಸ್ತ್ರಾಸ್ತ್ರಧಾರಿ ಉಗ್ರರ ಗುಂಪೊಂದು ಬೆದರಿಸಿ ಯುವ ಸೇನಾಧಿಕಾರಿ ಉಮರ್ ಫಯಾಜ್ ಅವರನ್ನು ಅಪಹರಿಸಿತ್ತು. ಕೆಲ ದಿನಗಳ ಹಿಂದಷ್ಟೇ ಫಯಾಜ್ ಅವರ ಮೃತದೇಹ ಬಸ್ ನಿಲ್ದಾಣವೊಂದರಲ್ಲಿ ದೊರಕಿತ್ತು.
ಫಯಾಜ್ ಅವರನ್ನು ಅಪಹರಿಸಿದ್ದ ಉಗ್ರರ ಗುಂಪು ಅವರ ತಲೆಗೆ ಹಾಗೂ ಎದೆಗೆ ಹತ್ತಿರದಿಂದಲೇ ಗುಂಡು ಹಾಕಿಸಿ ಹತ್ಯೆ ಮಾಡಿದ್ದರೆಂದು ವರದಿಗಳು ತಿಳಿಸಿದ್ದವು.