ದೇಶ

ಯುವ ಸೇನಾಧಿಕಾರಿ ಉಮರ್ ಫಯಾಜ್ ಹತ್ಯೆ ಮಾಡಿದ ಉಗ್ರರ ರೇಖಾಚಿತ್ರ ಬಿಡುಗಡೆ

Manjula VN
ಶ್ರೀನಗರ: ಯುವ ಸೇನಾಧಿಕಾರಿ ಉಮರ್ ಫಯಾಜ್ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದ ಉಗ್ರರ ರೇಖಾ ಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. 
ಉಮರ್ ಫಯಾಜ್ ಅವರ ಹತ್ಯೆ ಹಿಂದೆ ಲಷ್ಕರ್-ಇ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ಕೈವಾಡವಿರುವುದು ಖಚಿತವಾದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದ ಉಗ್ರರ ರೇಖಾ ಚಿತ್ರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. 
ರೇಖಾಚಿತ್ರದಲ್ಲಿರುವ ಉಗ್ರರು ಉಮರ್ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದು, ರೇಖಾಚಿತ್ರದಲ್ಲಿರುವ ಉಗ್ರರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ. 
ಮೂಲತಃ ಕಾಶ್ಮೀರದ ಕುಲ್ಗಾಂ ಜಿಲ್ಲೆಯವರಾದ ಫಯಾಜ್ ಅವರು, ರಜಪೂತಾನಾ ರೈಫಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಮ್ಮುವಿನ ಅಖ್ನೂರ್ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಷ್ಟೇ ಉಮರ್ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. 
ಶೋಪಿಯಾನ್ ಜಿಲ್ಲೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ಹೋಗಿದ್ದ ವೇಳೆ ಮದುವೆ ಮನೆಗೆ ನುಗ್ಗಿದ್ದ ಶಸ್ತ್ರಾಸ್ತ್ರಧಾರಿ ಉಗ್ರರ ಗುಂಪೊಂದು ಬೆದರಿಸಿ ಯುವ ಸೇನಾಧಿಕಾರಿ ಉಮರ್ ಫಯಾಜ್ ಅವರನ್ನು ಅಪಹರಿಸಿತ್ತು. ಕೆಲ ದಿನಗಳ ಹಿಂದಷ್ಟೇ ಫಯಾಜ್ ಅವರ ಮೃತದೇಹ ಬಸ್ ನಿಲ್ದಾಣವೊಂದರಲ್ಲಿ ದೊರಕಿತ್ತು. 
ಫಯಾಜ್ ಅವರನ್ನು ಅಪಹರಿಸಿದ್ದ ಉಗ್ರರ ಗುಂಪು ಅವರ ತಲೆಗೆ ಹಾಗೂ ಎದೆಗೆ ಹತ್ತಿರದಿಂದಲೇ ಗುಂಡು ಹಾಕಿಸಿ ಹತ್ಯೆ ಮಾಡಿದ್ದರೆಂದು ವರದಿಗಳು ತಿಳಿಸಿದ್ದವು.
SCROLL FOR NEXT