ಚೀನಾ ರಾಯಭಾರಿ-ನೇಪಾಳ ಕಾರ್ಯದರ್ಶಿ
ಕಠ್ಮಂಡು: ಚೀನಾದ ಮಹತ್ವಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿ ನೇಪಾಳ ಹಾಗೂ ಚೀನಾ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಎಂಒಯುಗೆ ಸಹಿ ಹಾಕಿವೆ.
ನೇಪಾಳ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಹಾಗೂ ಚೀನಾದ ರಾಯಭಾರಿ ಯು ಹಾಂಗ್ ಒಪ್ಪಂದಕ್ಕೆ ಸಹಿ ಹಾಕಿದ್ದು, ನೇಪಾಳ-ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ಇದೊಂದು ಪ್ರಮುಖ ಮೈಲಿಗಲ್ಲಾಗಿದ್ದು, ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಹೇಳಿದ್ದಾರೆ.
ಚೀನಾ ನಮ್ಮ ಆಪ್ತ ಮಿತ್ರ ರಾಷ್ಟ್ರವಾಗಿದ್ದು, ಚೀನಾದ ಅಭಿವೃದ್ಧಿಯಿಂದ ನೇಪಾಳಕ್ಕೂ ಸಹಾಯವಾಗಲಿದೆ ಎಂದು ಶಂಕರ್ ದಾಸ್ ಬೈರಾಗಿ ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಲ್ಲಿ ನೇಪಾಳವೂ ಸಹ ತೊಡಗಿಸಿಕೊಂಡಿದೆ. ಚೀನಾದೊಂದಿಗೆ ವಿಶ್ವದ ಅನೇಕ ರಾಷ್ಟ್ರಗಳು ಪ್ರಯೋಜನಕಾರಿ ಸಹಭಾಗಿತ್ವ ಹೊಂದುವಂತಹ ಯೋಜನೆಯನ್ನು ಪರಿಚಯಿಸಿದ್ದಕ್ಕಾಗಿ ಚೀನಾ ನಾಯಕತ್ವಕ್ಕೆ ಧನ್ಯವಾದ ತಿಳಿಸುತ್ತೇವೆ ಎಂದು ನೇಪಾಳ ಉಪಪ್ರಧಾನಿ ಕೃಷ್ಣ ಬಹದ್ದೂರ್ ಮಹಾರ ಹೇಳಿದ್ದಾರೆ.
ಏಷ್ಯಾದೊಂದಿಗೆ ಯುರೋಪ್ ಹಾಗೂ ಆಫ್ರಿಕಾಗಳನ್ನು ಬೆಸೆಯುವ ವ್ಯಾಪಾರ ಮಾರ್ಗಕ್ಕಾಗಿ ಚೀನಾ 2013 ರಲ್ಲಿ ಒನ್ ಬೆಲ್ಟ್ ಹಾಗೂ ಒನ್ ರೋಡ್ ಯೋಜನೆಯನ್ನು ಪರಿಚಯಿಸಿತ್ತು.