ಶ್ರೀನಗರ: ಇಸ್ಲಾಂಗಾಗಿ ನಡೆಯುತ್ತಿರುವ ನಮ್ಮ ಹೋರಾಟದಲ್ಲಿ ಮಧ್ಯೆ ಪ್ರವೇಶ ಮಾಡಿದರೆ, ತಲೆ ಕತ್ತರಿಸಿ ಲಾಲ್ ಚೌಕ್ ನಲ್ಲಿ ನೇತು ಹಾಕಿಬಿಡುತ್ತೇವೆಂದು ಪ್ರತ್ಯೇಕತಾವಾದಿಗಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಶನಿವಾರ ಎಚ್ಚರಿಕೆ ನೀಡಿದೆ.
ಹುರಿಯತ್ ನಾಯಕರಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ಝಾಕಿನ್ ಮುಸಾ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಆಡಿಯೋ ಕ್ಲಿಪ್ ನಲ್ಲಿ ಝಾಕೀನ್ ಮುಸಾ ಪ್ರತ್ಯೇಕತಾವಾದಿಗಳಿಗೆ ಬೆದರಿಕೆ ಹಾಕಿದ್ದಾನೆ. ಕಪಟವೇಷದಾರಿ ಹುರಿಯತ್ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಇಸ್ಲಾಂ ಕುರಿತಂತೆ ನಮ್ಮ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತಾವಾದಿಗಳು ಮಧ್ಯೆ ಪ್ರವೇಶ ಮಾಡಬಾರದು. ಮಾಡಿದ್ದೇ ಆದರೆ, ಅವರ ತಲೆಗಳನ್ನು ಕಡಿದು ಲಾಲ್ ಚೌಕ್ ನಲ್ಲಿ ನೇತು ಹಾಕುತ್ತೇವೆಂದು ಹೇಳಿದ್ದಾನೆ.
ಕಾಶ್ಮೀರದಲ್ಲಿ ಷರಿಯತ್ ಹೇರುವುದು ನಮ್ಮ ಹೋರಾಟದ ಉದ್ದೇಶವಾಗಿದೆಯೇ ಹೊರತು ಕಾಶ್ಮೀರದ ರಾಜಕೀಯ ತಿಕ್ಕಾಟದ ಸಮಸ್ಯೆ ಬಗೆಹರಿಸುವುದಕ್ಕಾಗಿ ಅಲ್ಲ. ನಮ್ಮ ಹೋರಾಟ ಇಸ್ಲಾಂ ಹಾಗೂ ಷರಿಯತ್ ಗಾಗಿ ಎಂಬುದನ್ನು ಪ್ರತ್ಯೇಕತಾವಾದಿಗಳು ತಿಳಿಯಬೇಕಿದೆ ಎಂದು ತಿಳಿಸಿದ್ದಾನೆ.
ಕಪಟವೇಷಧಾರಿ ಹುರಿಯತ್ ನಾಯಕರ ವಿರುದ್ಧ ಕಾಶ್ಮೀರ ಜನತೆ ಒಗ್ಗೂಡಬೇಕಿದೆ. ನಾವು ನಮ್ಮ ಧರ್ಮವನ್ನು ಪ್ರೀತಿಸಬೇಕು ಹಾಗೂ ನಮ್ಮ ಹೋರಾಟ ಇಸ್ಲಾಂಗಾಗಿ ಎಂಬುದು ಮನಗಾಣಬೇಕಿದೆ. ಇದನ್ನು ಹುರಿಯತ್ ನಾಯಕರು ಚಿಂತಿಸುತ್ತಿಲ್ಲ ಎಂದಾದರೆ, ಆಜಾದಿಯ ಅರ್ಥವೇನು.... ಲಾ ಇಲಾಹ ಇಲ್ ಅಲ್ಲಾ ಎಂಬ ಘೋಷಣೆಗಳನ್ನು ನಾವೇಕೆ ಕೇಳುತ್ತಿದ್ದೇವೆ? ಪ್ರತ್ಯೇಕತಾವಾದಿಗಳೇಕೆ ತಮ್ಮ ರಾಜಕೀಯಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾನೆ. ಆದರೆ, ಈ ಆಡಿಯೋ ಕ್ಲಿಪ್ ಕುರಿತ ದೃಢೀಕರಣ ಈ ವರೆಗೂ ಸ್ಪಷ್ಟವಾಗಿಲ್ಲ.