ದಿಯೋರಾ: ಗಡಿಯಲ್ಲಿ ಇತ್ತೀಚೆಗೆ ಹುತಾತ್ಮರಾದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್ ಪ್ರೇಮ್‌ಸಾಗರ್ ಅವರ ಮನೆಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡುತ್ತಾರೆಂಬ ಹಿನ್ನೆಲೆಯಲ್ಲಿ ಮನೆಗೆ ಜಿಲ್ಲಾಡಳಿತದ ವತಿಯಿಂದ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲಾಯಿತು. ಸೋಫಾ ತಂದಿರಿಸಲಾಯಿತು ಮತ್ತು ನೆಲಕ್ಕೆ ಕಾರ್ಪೆಟ್ ಹಾಸಲಾಯಿತು.
ಇದನ್ನು ನೋಡಿದ ಹುತಾತ್ಮ ಯೋಧನ ಕುಟುಂಬದ ಸದಸ್ಯರಿಗೆ ಅಚ್ಚರಿಯಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹುತಾತ್ಮ ಯೋಧನ ಮನೆಗೆ ಭೇಟಿ ನೀಡುವುದಕ್ಕೆ ಮೊದಲು ಜಿಲ್ಲಾಡಳಿತ ಈ ವ್ಯವಸ್ಥೆಗಳನ್ನು ಮಾಡಿತ್ತು.
ಮುಖ್ಯಮಂತ್ರಿ ಹಿಂದಿರುಗಿದ 30 ನಿಮಿಷಗಳಲ್ಲಿ ಮನೆಯವರಿಗೆ ಇನ್ನಷ್ಟು ಆಶ್ಚರ್ಯ ಕಾದಿತ್ತು. ಈ ಎಲ್ಲ ವಸ್ತುಗಳನ್ನು ಅಧಿಕಾರಿಗಳು ಎತ್ತಿಕೊಂಡು ಹೋದರು ಎಂದು ಹುತಾತ್ಮ ಯೋಧನ ಸಹೋದರ ದಯಾಸಾಗರ್ ತಿಳಿಸಿದ್ದಾರೆ.
ಈ ತಿಂಗಳ ಒಂದರಂದು ಗಡಿ ನಿಯಂತ್ರಣ ರೇಖೆಯ ಸಮೀಪ ಗಸ್ತು ಕರ್ತವ್ಯದಲ್ಲಿದ್ದ ಪ್ರೇಮ್‌ಸಾಗರ್ ಅವರನ್ನು ಪಾಕಿಸ್ತಾನದ ಗಡಿ ರಕ್ಷಣಾ ಪಡೆಯ ಯೋಧರು ಕೊಂದಿದ್ದರು.
ಮುಖ್ಯಮಂತ್ರಿ ಭೇಟಿ ನೀಡುವವರೆಗೆ ಮೃತದೇಹದ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಕುಟುಂಬದ ಸದಸ್ಯರು ಪಟ್ಟು ಹಿಡಿದಿದ್ದರು. ಮುಖ್ಯಮಂತ್ರಿ ದೂರವಾಣಿ ಮೂಲಕ ಮಾತನಾಡಿದ ನಂತರವೇ ಅಂತ್ಯಕ್ರಿಯೆ ಮಾಡಲಾಗಿತ್ತು.
ಮುಖ್ಯಮಂತ್ರಿಗಳು ಹುತಾತ್ಮ ಯೋಧನ ಗ್ರಾಮಕ್ಕೆ ಬರುವ ಹಿನ್ನೆಲೆಯಲ್ಲಿ ರಸ್ತೆಗಳನ್ನೆಲ್ಲಾ ಸ್ವಚ್ಚಗೊಳಿಸಲಾಗಿತ್ತು. ತೆರೆದ ಚರಂಡಿಗಳನ್ನೆಲ್ಲಾ ಆ ಸ್ವಲ್ಪ ಸಮಯಕ್ಕಾಗಿ ಮುಚ್ಚಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics