ಪಠಾಣ್'ಕೋಟ್ ಹುತಾತ್ಮ ಯೋಧನ ಕುಟುಂಬಸ್ಥರಿಗೆ ಥಳಿತ ಪ್ರಕರಣ: ಆರೋಪಿಗಳು ನಾಪತ್ತೆ
ಗುರುದಾಸ್'ಪುರ: ಪಠಾಣ್ ಕೋಟ್ ಹುತಾತ್ಮ ಯೋಧ ಕುಲ್ವಂತ್ ಸಿಂಗ್ ಅವರು ಕುಟುಂಬಸ್ಥರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಾವೆಲ್ ಏಜೆಂಟ್ ಹಾಗೂ ಆತನ ಸಹಚರರು ಹುತಾತ್ಮ ಯೋಧ ಕುಲ್ವಂತ್ ಸಿಂಗ್ ಅವರ ಸಹೋದರ ಹಾಗೂ ಅವರ ಪತ್ನಿಗೆ ರಸ್ತೆಯೊಂದರ ಮಧ್ಯೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತನಿಖೆಗೆ ಆದೇಶಿಸಿದ್ದರು. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದೇಶದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳಿಗಾಗಿ ಈಗಾಗಲೇ ವಿವಿಧ ತಂಡಗಳನ್ನು ರಚನೆ ಮಾಡಲಾಗಿತ್ತು, ಹುಡುಕಾಟ ನಡೆಸಲಾಗುತ್ತಿದೆ. ಇದಲ್ಲದೆ, ಆರೋಪಿಗಳು ಅಡಗಿರುವ ಸ್ಥಳಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಕಪುರ್ತಾಲಾ ಜಿಲ್ಲೆ ಸೇರಿದಂತೆ ಹಲವೆಡೆಗೆ ತನಿಖಾ ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ಗುರುದಾಸ್'ಪುರ ಎಸ್ಎಸ್'ಪಿ ಭುಪಿಂದರ್'ಜಿತ್ ಸಿಂಗ್ ಅವರು ಹೇಳಿದ್ದಾರೆ.