ಹೈದರಾಬಾದ್: ತೆಲಂಗಾಣದಲ್ಲಿ ಭೀಕರ ರಸ್ತೆಯ ಅಪಘಾತ ಸಂಭವಿಸಿದ್ದು, ಮಿನಿವ್ಯಾನ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮದುಮಗ ಸೇರಿ ಮೂವರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ ಘಟನೆ ಸೂರ್ಯಪೇಟ್ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ದಿಬ್ಬಣದೊಂದಿಗೆ ಸಾಗುತ್ತಿದ್ದ ಮಿನಿ ವ್ಯಾನ್'ಗೆ ವೇಗವಾಗಿ ಬರುತ್ತಿದ್ದ ಲಾರಿಯೊಂದು ರಭಸದಿಂದ ಡಿಕ್ಕಿಹೊಡೆದಿದೆ. ಪರಿಣಾಮ ಮಿನಿವ್ಯಾನ್ ನಲ್ಲಿದ್ದ ಮದುಮಗ ಶೇಷ ನಾಯಿನಾಥ್, ಆತನ ತಂದೆ ಹಾಗೂ ಮೂರು ವರ್ಷದ ಮಗುವೊಂದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಅಲ್ಲದೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಮೃತರು ಹೈದರಾಬಾದ್ ನ ಕೂಕಟಪಲ್ಲಿ ಗ್ರಾಮದವರೆಂದು ಹೇಳಲಾಗುತ್ತಿದ್ದು, ಕಮ್ಮಮ್ ಜಿಲ್ಲೆಯ ಚೆರ್ಲಾಗೆ ತೆರಳುತ್ತಿದ್ದರು ಎಂದು ವರದಿಗಳು ತಿಳಿಸಿವೆ.