ದೇಶ

ಕಾರ್ತಿ ಚಿದಂಬರಂ ವಿರುದ್ಧ ಅಕ್ರಮ ಹಣ ಚಲಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯದ ದೂರು!

Srinivasamurthy VN

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ಚಲಾವಣೆ ಕಾಯ್ದೆ 2002ರ (ಹವಾಲಾ) ಅಡಿಯಲ್ಲಿ ದೂರು ದಾಖಲಿಸಿದೆ ಎಂದು  ತಿಳಿದುಬಂದಿದೆ.

ಎರಡು ದಿನಗಳ ಹಿಂದಷ್ಟೇ ಕಾರ್ತಿ ಚಿದಂಬರಂ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿ ಎಫ್​ಐಆರ್ ದಾಖಲಿಸಿತ್ತು. ಮೂಲಗಳ ಪ್ರಕಾರ ಐಎನ್​ಎಕ್ಸ್ ಮೀಡಿಯಾದಿಂದ ಕಾನೂನು ಬಾಹಿರವಾಗಿ ಹಣ ಸ್ವೀಕರಿಸಿರುವ ಕುರಿತು  ಸಿಬಿಐ ದಾಖಲಿಸಿರುವ ಎಫ್​ಐಆರ್ ​ನಲ್ಲಿ ಸಾಕ್ಷ್ಯಗಳು ದೊರೆತ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬಂರ ಸೇರಿದಂತೆ ಐಎನ್​​ಎಕ್ಸ್ ಮೀಡಿಯಾ ಮತ್ತು ಅದರ ನಿರ್ದೇಶಕರು, ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ  ಮತ್ತಿತರರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲಿದ್ದು, ಸಿಬಿಐ ಮಂಗಳವಾರ ನಡೆಸಿದ ದಾಳಿ ವೇಳೆ ಮಹತ್ವದ  ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಮುಖರ್ಜಿ ಮಾಲೀಕತ್ವದ ಸಂಸ್ಥೆಯಿಂದ ಹಣ ವರ್ಗಾವಣೆಯಾಗಿರುವ ದಾಖಲೆಗಳು ಪತ್ತೆಯಾಗಿದ್ದವು ಎಂದು ತಿಳಿದುಬಂದಿದೆ.

ಈ ಹಿಂದೆ ಸಿಬಿಐ ಅಧಿಕಾರಿಗಳು ಕಾರ್ತಿ ಚಿದಂಬರಂ ಮತ್ತು ಮುಖರ್ಜಿ ವಿರುದ್ಧ ಕ್ರಿಮಿನಲ್ ಅಪರಾಧ, ಮೋಸ, ಅಕ್ರಮವಾಗಿ ಹಣ ಸ್ವೀಕಾರ, ಸಾರ್ವಜನಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಆರೋಪದ ಮೇರೆಗೆ ಪ್ರಕರಣಗಳನ್ನು  ದಾಖಲಿಸಿಕೊಂಡಿದ್ದರು. ಅಲ್ಲದೆ ಕಾರ್ತಿ ಚಿದಂಬರಂ ವಿವಿಧ ಸೇವೆಗಳಿಗೆ 10 ಲಕ್ಷ ರು.ಗಳನ್ನು ಪಾವತಿಸಿರುವ ರಸೀದಿಗಳನ್ನು ಕೂಡ ವಶಪಡಿಸಿಕೊಂಡಿತ್ತು. ಈ ರಸೀದಿಗಳ ಮೂಲಕ ಸಂದಾಯವಾಗಿರುವ ಹಣ ಪರೋಕ್ಷವಾಗಿ ಕಾರ್ತಿ  ಒಡೆತನದ ಅಡ್ವಾಂಟೇಜ್ ಸ್ಟ್ಯಾಟರ್ಜಿಕ್ ಕನ್ಸಲ್ಟಿಂಗ್ (ಪ್ರೈ) ಲಿಮಿಟೆಡ್ ಕಂಪನಿಗೆ ಸಂಬಂಧಿಸಿದೆ ಎಂದು ಕೂಡ ಸಿಬಿಐ ಆರೋಪಿಸಿದೆ.

ಇನ್ನು ಈ ಬಗ್ಗೆ ಕಾರ್ತಿ ಚಿದಂಬರಂ ಸಿಬಿಐನ ಎಲ್ಲ ಆರೋಪಗಳನ್ನೂ ನಿರಾಕರಿಸಿದ್ದು, ಅಲ್ಲದೇ, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ತಮ್ಮ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಲಾಗಿದೆ. ಕಾನೂನು ಹೋರಾಟ  ನಡೆಸಲಾಗುವುದು ಎಂದು ಹೇಳಿದ್ದರು.

SCROLL FOR NEXT