ದೇಶ

ಕೇಜ್ರಿವಾಲ್ ವಿರುದ್ಧ ಮೂರನೇ ಬಾಂಬ್: ಸಾಕ್ಷ್ಯಾಧಾರ ಬಹಿರಂಗ ಪಡಿಸಿದ ಕಪಿಲ್ ಮಿಶ್ರಾ

Manjula VN
ನವದೆಹಲಿ: ಹವಾಲ ದಂಧೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾಗಿಯಾಗಿದ್ದಾರೆಂದು ಗಂಭೀರವಾಗಿ ಆರೋಪ ಮಾಡಿದ್ದ ಕಪಿಲ್ ಮಿಶ್ರಾ ಅವರು ಈ ಕುರಿತ ಸಾಕ್ಷ್ಯಾಧಾರಗಳನ್ನು ಶುಕ್ರವಾರ ಬಹಿರಂಗ ಪಡಿಸಿದ್ದಾರೆ. 
ರಾಜಧಾನಿ ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಕಪಿಲ್ ಮಿಶ್ರಾ ಅವರು, ಪವರ್ ಪಾಯಿಂಟ್ ಪ್ರಸ್ತುತಿ ಪಡಿಸುವ ಮೂಲಕ ಶೆಲ್ ಕಂಪನಿಗಳಿಂದ ಆಮ್ ಆದ್ಮಿ ಪಕ್ಷ ಹಣ ಪಡೆದಿರುವ ಕುರಿತಂತೆ ಹಾಗೂ ಕೇಜ್ರಿವಾಲ್ ಅವರು ಹವಾಲಾ ದಂಧೆಯಲ್ಲಿ ನೇರವಾಗಿ ಭಾಗಿಯಾಗಿರುವ ಕುರಿತಂತೆ ಸಾಕ್ಷ್ಯಾಧಾರಗಳನ್ನು ಬಹಿರಂಗ ಪಡಿಸಿದ್ದಾರೆ. 
ಭ್ರಷ್ಟಾಚಾರ ಚಟುವಟಿಕೆಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಬಹಿರಂಗ ಪಡಿಸುತ್ತಿದ್ದರೂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ ನೀಡುವ ಬದಲು ಮೌನವಹಿಸಿದ್ದಾರೆ. ಕಳೆದ ಭಾನುವಾರ ಕೂಡ ಹವಾಲಾ ದಂಧೆಯಲ್ಲಿ ಕೇಜ್ರಿವಾಲ್ ಅವರು ಭಾಗಿಯಾಗಿದ್ದಾರೆಂದು ಹೇಳಿ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದೆ. ಸಾಕ್ಷ್ಯಾಧಾರ ಒದಗಿಸಿ 1 ವಾರ ಕಳೆದಿದೆ. ಆದರೂ, ಆಮ್ ಆದ್ಮಿ ಪಕ್ಷ ಮಾತ್ರ ಯಾವುದೇ ಸ್ಪಷ್ಟನೆಗಳನ್ನು ನೀಡಿಲ್ಲ. ಶೆಲ್ ಕಂಪನಿಗಳಿಗೆ ಆಪ್ ಹೇಗೆ ನಕಲಿ ಪತ್ರಗಳನ್ನು ನೀಡುತ್ತಿತ್ತು ಎಂಬುದಕ್ಕೆ ಇಂದು ನಾನು ಒದಗಿಸಿರುವ ದಾಖಲೆಗಳೇ ಸಾಕ್ಷಿ ಎಂದು ಹೇಳಿದ್ದಾರೆ. 
ಮುಕೇಶ್ ಕುಮಾರ್ ಅವರ ಬಳಿ ಆಮ್ ಆದ್ಮಿ ಪಕ್ಷ ಪಡೆದುಕೊಂಡಿರುವ ದೇಣಿಗೆ ಹಣದ ಕುರಿತಂತೆ ಕೇಜ್ರಿವಾಲ್ ಅವರಿಗೆ ಧೈರ್ಯವಿದ್ದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ. ಆಪ್ ವಿರುದ್ಧ ಎರಡು ವಿಚಾರಗಳನ್ನು ಖಂಡಿತವಾಗಿಯೂ ಸಾಬೀತು ಪಡಿಸುತ್ತೇನೆ. ಹವಾಲಾ ದಂಧೆಯಲ್ಲಿ ಆಪ್ ಭಾಗಿಯಾಗಿದ್ದು, ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸುತ್ತಿದ್ದಾರೆ. 
ಕೇಜ್ರಿವಾಲ್ ಅವರು ಕಳೆದ ಗುರುವಾರ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ನಕಲಿಯಾಗಿದೆ. ಶೆಲ್ ಕಂಪನಿಗಳಿಗೆ ನೀಡಿದ್ದ ಪತ್ರಗಳು ನಕಲಿಯಾಗಿದೆ. ಕೇಜ್ರಿವಾಲ್ ಅವರಿಗ ಈ ಮೂಲಕ ಸವಾಲೆಸೆಯುತ್ತಿದ್ದೇನೆ. ಅವರಿಗೆ ಧೈರ್ಯವಿರುವುದೇ ಆದರೆ, ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಿ. ಮುಕೇಶ್ ಕುಮಾರ್ ಅವರಿಂದ ಎಷ್ಟು ದೇಣಿಗೆ ಪಡೆದಿದ್ದಾರೆಂದು ಹೇಳಲಿ. ಮುಕೇಶ್ ಕುಮಾರ್ ಒಬ್ಬ ಬ್ಯಾಂಕ್ ಸುಸ್ತಿದಾರ. ಆಪ್ ಗೆ ಆತ ರೂ.2 ಕೋಟಿ ಹಣವನ್ನು ನೀಡಲು ಹೇಗೆ ಸಾಧ್ಯ?... ಎಂದು ಕಪಿಲ್ ಮಿಶ್ರಾ ಪ್ರಶ್ನಿಸಿದ್ದಾರೆ. 
ಮುಕೇಶ್ ಕುಮಾರ್ ಕಂಪನಿ ಮೌಲ್ವ ವರ್ಧಿತ ತೆರಿಗೆ (ವಿಎಟಿ) ಬಾಕಿದಾರ ಕಂಪನಿಯಾಗಿದೆ. ದೆಹಲಿ ಸರ್ಕಾರಕ್ಕೆ ವಿಎಟಿ ಪಾವತಿ ಮಾಡುವ ಬದಲು ಅವರು ಪಕ್ಷಕ್ಕೆ ಇಷ್ಟೊಂದು ಹಣವನ್ನು ನೀಡುತ್ತಾರೆಯೇ...ಇದಕ್ಕೆ ಮುಖ್ಯಮಂತ್ರಗಳೇ ಉತ್ತರ ನೀಡುತ್ತಿಲ್ಲ? ಆಮ್ ಆದ್ಮಿ ಪಕ್ಷದ ನಾಯಕರು ವಿದೇಶ ಪ್ರವಾಸದ ಕುರಿತ ಮಾಹಿತಿಗಳು ಬಹಿರಂಗಗೊಂಡರೆ ಕೇಜ್ರಿವಾಲ್ ಅವರು ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 
ಒಂದೆಡೆ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಕಪಿಲ್ ಮಿಶ್ರಾ ಹಾಗೂ ಶಾಸಕ ಮಂಜಿದರ್ ಸಿರ್ಸಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ದಾಖಲಿಸಿದ್ದಾರೆ. 
SCROLL FOR NEXT