ನವದೆಹಲಿ: ಬಿಹಾರದ ಸಮಸ್ತಿಪುರದ ಮಹಿಳೇಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾದ ಬ್ಯಾಸ್ಕೆಟ್ ನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿದ್ದರು. ಮಹಿಳೆ ಕಳಿಸಿಕೊಟ್ಟ ಉಡುಗೊರೆಯಿಂದ ಸಂತಸಗೊಂಡ ಪ್ರಧಾನಿ ನರೇಂದ್ರ ಮೋದಿ ಇದರಿಂದ ತಮ್ಮ ಸ್ವಚ್ಛ ಭಾರತ ಯೋಜನೆಗೆ ನೆರವು ಸಿಗಲಿದೆ ಎಂದು ಹೇಳಿದ್ದಾರೆ.
ಹೌದು, ಪ್ಲಾಸ್ಟಿಕ್ ತ್ಯಾಜ್ಯದಿಂದ ಮಹಿಳೆ ತಯಾರಿಸುವ ಉಡುಗೊರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜನೆಗೆ ಸಹಕಾರಿಯಾಗಲಿರುವ ಅಂಶಗಳನ್ನು ಕಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿ ಉಡುಗೊರೆ ಕಳಿಸಿಕೊಟ್ಟ ಮಹಿಳೆಗೆ ಪತ್ರ ಬರೆದಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಗಿಫ್ಟ್ ತಯಾರಿಸುವುದರಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಾಯವಾಗುವುದಷ್ಟೇ ಅಲ್ಲದೇ, ಉದ್ಯಮವಾಗಿಯೂ ಈ ಕೌಶಲವನ್ನು ಉಪಯೋಗಿಸಬಹುದಾಗಿದೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಪತ್ರದ ಬಗ್ಗೆ ಬಿಹಾರದ ಮಹಿಳೆ ಪ್ರತಿಕ್ರಿಯೆ ನೀಡಿದ್ದು " ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಪತ್ರ ಬರೆದಿರುವುದು ಅತ್ಯಂತ ಸಂತಸ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಮಹಿಳೆಯ ಮಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ಕಳಿಸಲು ಉತ್ತೇಜನ ನೀಡಿದ್ದು, ಆಕೆಯ ಪತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧನಿ ನರೇಂದ್ರ ಮೋದಿ ಅವರ ಪತ್ರದಿಂದ ಉತ್ತೇಜನ ಪಡೆದಿರುವ ಮಹಿಳೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಡುಗೊರೆಗಳನ್ನು ಮಾಡುವ ಕರಕುಶಲ ಉದ್ಯಮವನ್ನು ಪ್ರಾರಂಭಿಸುವ ಚಿಂತನೆ ನಡೆಸಿದ್ದಾರೆ.