ಲಲಿತಾ ಮದುವೆಯಲ್ಲಿ ವಿವೇಕ್ ಒಬೆರಾಯ್
ಮುಂಬೈ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಬುಧವಾರ ನಡೆದ ಆಸಿಡ್ ಸಂತ್ರಸ್ಥೆಯ ಮದುವೆಯಲ್ಲಿ ವಿಶೇಷ ಅಥಿತಿಯಾಗಿ ಭಾಗವಹಿಸಿ ದಂಪತಿಗಳಿಗೆ ಒಂದು ಫ್ಲಾಟ್ ಉಡುಗೊರೆಯಾಗಿ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಆಸಿಡ್ ದಾಳಿಗೆ ಒಳಗಾಗಿ 17 ಸರ್ಜರಿ ನಂತರ ಒಂದು ರಾಂಗ್ ನಂಬರ್ ನಿಂದ ಸಿಕ್ಕ ಹುಡುಗನನ್ನು ಪ್ರೀತಿಸಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಲಿತಾ ಬೆನ್ ಬನ್ಸಿ ಅವರಿಗೆ ವಿವೇಕ್ ಒಬೆರಾಯ್ ಅವರು ಥಾಣೆಯಲ್ಲಿರುವ ತಮ್ಮ ಫ್ಲಾಟ್ ನ ಕೀ ಹಸ್ತಾಂತರಿಸಿದ್ದಾರೆ. ಅಲ್ಲದೆ ಅವರೊಂದಿಗೆ ಮದುವೆಗೆ ಆಗಮಿಸಿದ್ದ ಫ್ಯಾಷನ್ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಖೊಸ್ಲಾ ಅವರು ಮದುವೆ ನೆಕ್ಲೆಸ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ.
ಲಲಿತಾ ಬೆನ್ ಬನ್ಸಿ ಅವರಿಗೀಗ 26ರ ಹರೆಯ. ಕೆಲವು ತಿಂಗಳ ಹಿಂದೆಯಷ್ಟೇ ಲಲಿತಾ ಅವರಿಗೆ ಫೋನ್ ಕರೆಯೊಂದು ಬಂದಿತ್ತು. ಅದು ರಾಂಗ್ ನಂಬರ್ !. ಆ ಹೊತ್ತಿಗೆ ರಾಂಗ್ ನಂಬರ್ ಎಂದು ಹೇಳಿ ಫೋನ್ ಇಟ್ಟರೂ, ಅಲ್ಲಿಗೆ ಆ ಕರೆಯ ಬಾಂಧವ್ಯ ಮುಕ್ತಾಯವಾಗಲಿಲ್ಲ. ಫೋನ್ ಮಾತುಕತೆಯಲ್ಲೇ ಆತ್ಮೀಯತೆ ಬೆಳೆದು ಅದು ಪ್ರೇಮಕ್ಕೆ ತಿರುಗಿತು. ಆ ಕರೆ ಮಾಡಿದ ವ್ಯಕ್ತಿಯ ಹೆಸರು ರವಿಶಂಕರ್. ಈಗ ಲಲಿತಾ ಬೆನ್ ಬನ್ಸಿ ಅವರ ಪತಿ.
2012ರಲ್ಲಿ ಲಲಿತಾ ಮತ್ತು ಅವರ ಸೋದರ ಸಂಬಂಧಿ ನಡುವೆ ಚಿಕ್ಕ ವಿಷಯಕ್ಕೆ ನಡೆದ ಜಗಳದಲ್ಲಿ ಸೋದರ ಸಂಬಂಧಿ ಲಲಿತಾ ಮುಖದ ಮೇಲೆ ಆಸಿಡ್ ಎರಚಿದ್ದನು. ಆಸಿಡ್ ದಾಳಿಯಲ್ಲಿ ಮುಖ ವಿಕಾರವಾಯಿತು.17 ಸರ್ಜರಿಗಳ ನಂತರ ಸ್ವಲ್ಪ ಸುಧಾರಿಸಿಕೊಂಡು ಈ ಮದುವೆ ಸಂಭ್ರಮದಲ್ಲಿದ್ದಾರೆ.