ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ಚುನಾವಣೆ ವೇಳೆ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚಲಾಗಿತ್ತು ಎಂದು ಬೊಬ್ಬೆ ಹೊಡೆದಿದ್ದ ಹಲವು ರಾಜಕೀಯ ಪಕ್ಷಗಳು, ಇದೀಗ ಚುನಾವಣಾ ಆಯೋಗ ಹಾಕಿದ್ದ ಮತಯಂತ್ರ ಹ್ಯಾಕ್ ಮಾಡಿ ತೋರಿಸುವಂತೆ ಹಾಕಿದ್ದ ಸವಾಲು ಸ್ವೀಕರಿಸಲು ಹಿಂದೇಟು ಹಾಕುತ್ತಿವೆ.
ಚುನಾವಣಾ ಆಯೋಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಳಕೆ ಮಾಡಿದ್ದ ಮತಯಂತ್ರಗಳು ಹ್ಯಾಕ್ ಆಗಿವೆ ಎಂದು ಭಾರಿ ಪ್ರಮಾಣದ ಪ್ರತಿಭಟನೆಯನೇ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಹಾಗೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಗಳೂ ಕೂಡ ಚುನಾವಣಾ ಆಯೋಗದ ಸಾವಾಲನ್ನು ಸ್ವೀಕರಿಸದೇ ಇರುವುದು ಅಚ್ಚರಿ ತಂದಿದೆ. ಈ ಹಿಂದೆ ದೆಹಲಿ ವಿಧಾನಸಭೆಯಲ್ಲಿ ಮತಯಂತ್ರದ ಮಾದರಿಯನ್ನು ತಂದು ಹೇಗೆಲ್ಲಾ ಮತಯಂತ್ರವನ್ನು ಹ್ಯಾಕ್ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ನೀಡಿದ್ದ ಆಮ್ ಆದ್ಮಿ ಪಕ್ಷ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.
ಇವಿಎಂಗಳನ್ನು ಹ್ಯಾಕ್ ಮಾಡಲಾಗದು. ಸಾಧ್ಯವಿದ್ದರೆ ಮಾಡಿ ತೋರಿಸಿ ಎಂದು ಆಯೋಗ ಹಾಕಿರುವ ಸವಾಲನ್ನು ಸ್ವೀಕರಿಸಲು ಇದೇ ಮೇ 26 ಕಡೆಯ ದಿನವಾಗಿದ್ದು, ಜೂನ್ 3ರಂದು ಇವಿಎಂ ಹ್ಯಾಕಿಂಗ್ ಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಇವಿಎಂ ಹ್ಯಾಕಿಂಗ್ ಹೆಸರು ನೊಂದಾಯಿಸಿಕೊಳ್ಳಲು ಕೆಲವೇ ಗಂಟೆಗಳಷ್ಚೇ ಬಾಕಿ ಉಳಿದಿದ್ದು, ಇದುವರೆಗೆ ಯಾವುದೇ ರಾಷ್ಟ್ರ ಅಥವಾ ರಾಜ್ಯದ ಮಟ್ಟದ ರಾಜಕೀಯ ಪಕ್ಷಗಳು ಸವಾಲನ್ನು ಸ್ವೀಕರಿಸಿದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿಲ್ಲ. ಜೂನ್ 3ರಂದು ಇವಿಎಂ ಹ್ಯಾಕ್ ಮಾಡುವ ಅವಕಾಶವನ್ನು ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಗೆ ಕಲ್ಪಿಸಿದೆ. ಈ ನಡುವೆ ಹ್ಯಾಕಿಂಗ್ ಗಾಗಿ ಇವಿಎಂನ ಮದರ್ ಬೋರ್ಡ್ ಬದಲಾಯಿಸಲು ಅವಕಾಶ ನೀಡಬೇಕೆಂಬ ಆಪ್ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ.