ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಪ್ರಸ್ತುತ ಪ್ರತ್ಯೇಕತಾವಾದಿಗಳೊಂದಿಗೆ ಯಾವುದೇ ರೀತಿಯ ಮಾತುಕತೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ಕಾಶ್ಮೀರದ ಹಲವೆಡೆ ಈಗಲೂ ಹಿಂಸಾಚಾರಗಳು ಮುಂದುವರೆದಿದೆ. ಇಂತಹ ಸಮಯದಲ್ಲಿ ಹಿಂಸಾಚಾರ ಪ್ರೇರೇಪಿಸುತ್ತಿರುವ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರಿಗರ ಸಮಸ್ಯೆಗಳ ಕುರಿತಂತೆ ಸರ್ಕಾರ ಶೀಘ್ರದಲ್ಲೇ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಲಿದೆ. ಆದರೆ, ಎನ್ ಡಿಎ ಸರ್ಕಾರ ಯಾವುದೇ ಕಾರಣಕ್ಕೂ ಪ್ರತ್ಯೇಕತಾವಾದಿಗಳಾಲೀ, ಭಯೋತ್ಪಾದಕರೊಂದಿಗಾಗಲಿ ರಾಜಿಯಾಗುವುದಿಲ್ಲ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸಾಕಷ್ಟು ಜನರು ಭಯೋತ್ಪಾದನೆ ಹಾಗೂ ಹಿಂಸಾಚಾರದಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿ ಅಂತಹವರ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಕಲ್ಲುತೂರಾಟಗಾರನನ್ನು ಜೀಪಿಗೆ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆ ಕ್ರಮವನ್ನು ಜೇಟ್ಲಿಯವರು ಸಮರ್ಥಿಸಿಕೊಂಡಿದ್ದಾರೆ. ಕಲ್ಲು ತೂರಾಟದಂತಹ ಪರಿಸ್ಥಿತಿ ನಿಭಾಯಿಸುವಾಗ ರಾಜಕೀಯವಾಗಲೀ ಅಥವಾ ಮಾಧ್ಯಮಗಳ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಸೇನಾಧಿಕಾರಿಗಳು ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಚುನಾವಣಾಧಿಕಾರಿಗಳನ್ನು ರಕ್ಷಣೆ ಮಾಡುವುದು ಸೇನಾಧಿಕಾರಿಗಳ ಕೈಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅಧಿಕಾರಿ ತಮ್ಮ ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಜನರ ಮೇಲೆ ಗುಂಡಿನ ದಾಳಿ ನಡೆಸಬೇಕಿತ್ತೇ? ಅದೊಂದೇ ಆಯ್ಕೆಯಾಗಬೇಕಿತ್ತೇ? ಕಾಲ್ತುಳಿತ ಸೃಷ್ಟಿಸಬೇಕಿತ್ತೇ? ಪರಿಸ್ಥಿತಿ ನಿಭಾಯಿಸಲು ಅಧಿಕಾರಿ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿಗಳಿಗೆ ನಷ್ಟ ಎದುರಾಗಬಾರದೆಂಬ ಕಾರಣಕ್ಕೆ ರಾಷ್ಟ್ರೀಯ ಹಿತಾಸಕ್ತಿಯಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಯ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics