ನರೇಂದ್ರ ಮೋದಿ - ವಿಜಯ್ ಗೋಯಲ್
ರಾಯ್ ಪುರ: ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಎರಡನೇ ಮಹಾತ್ಮ ಗಾಂಧಿ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಇಂದು ಚತ್ತೀಸ್ ಗಢದ ರಾಯ್ ಪುರದಲ್ಲಿ ನಡೆದ ಮೇಕಿಂಗ್ ಆಫ್ ಡೆವೆಲಪಡ್ ಇಂಡಿ(MODI) ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಯಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿಗಳಾದ ಜವಾಹಾರ್ ಲಾಲ್ ನೆಹರು ಹಾಗೂ ಇಂಧಿರಾ ಗಾಂಧಿಯವರಿಗೆ ಹೋಲಿಕೆ ಮಾಡಬಹುದೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಒಂದು ಹೆಜ್ಜೆ ಮುಂದೆ ಹೋಗಿ ಮೋದಿಜಿ ಭಾರತದ ಎರಡನೇ ಮಹಾತ್ಮ ಗಾಂಧಿ ಎಂದು ಗೋಯಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಯುಪಿಎ ಸರ್ಕಾರದ ಭ್ರಷ್ಟಾಚಾರ, ಹಗರಣಗಳಿಂದ ಬೇಸತ್ತಿದ್ದ ಭಾರತದ ಜನತೆ ಗುಜರಾತ್ ನ ಸಂತ(ಮೋದಿ)ನಿಗೆ ದೇಶ ಮುನ್ನಡೆಸಲು ಅವಕಾಶ ನೀಡಿದ್ದಾರೆ ಎಂದು ವಿಜಯ್ ಗೋಯಲ್ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ದೇಶದ ನೇತೃತ್ವ ವಹಿಸಿಕೊಂಡ ನಂತರ ಭಾರತವನ್ನು ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸ್ವಾತಂತ್ರ್ಯ ನಂತರ ಯಾವ ಪ್ರಧಾನಿಯೂ ಮಾಡದ ಕೆಲಸಗಳನ್ನು ಮಾಡಿದ್ದಾರೆ ಎಂದು ಗೋಯಲ್ ಮೋದಿಯನ್ನು ಹಾಡಿ ಹೋಗಳಿದ್ದಾರೆ.