ನವದೆಹಲಿ: ಜೀಪಿಗೆ ಯುವಕರನ್ನು ಕಟ್ಟಿದ್ದ ಭಾರತೀಯ ಸೇನೆಯ ಯುವ ಅಧಿಕಾರಿ ಮೇಜರ್ ಲೀತುಲ್ ಗೊಗೊಯ್ ಕ್ರಮವನ್ನು ಬೆಂಬಲಿಸುವ ಮೂಲಕ ಕಾಶ್ಮೀರದ ಪುಂಡಾಟಿಕೆಗೆ ಮಾನವ ಗುರಾಣಿಯನ್ನು ಹಿಡಿಯುವುದನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಮರ್ಥಿಸಿಕೊಂಡಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥರು, ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಸೇನಾ ಪಡೆಗಳ ನೈತಿಕ ಸ್ಥೈರ್ಯ ಹೆಚ್ಚಿಸುವುದು
ಲೀತುಲ್ ಗೊಗೊಯ್ ಅವರನ್ನು ಸನ್ಮಾನಿಸುವುದರ ಉದ್ದೇಶವಾಗಿತ್ತು ಎಂದಿದ್ದಾರೆ.
ನೇರವಾಗಿ ಎದುರಿಸಲು ಸಾಧ್ಯವಾಗದೇ ಪರೋಕ್ಷ ಯುದ್ಧ ನಡೆಸಲಾಗುತ್ತಿದೆ. ಪರೋಕ್ಷ ಯುದ್ಧ ಅತ್ಯಂತ ಕೀಳುಮಟ್ಟದ ಯುದ್ಧ. ಆದ್ದರಿಂದ ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುವ ಪುಂಡರನ್ನು ಎದುರಿಸಲು ನವೀನ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎಂದು ಸೇನಾ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪೆಟ್ರೋಲ್ ಬಾಂಬ್ ನಿಂದ ದಾಳಿ ಮಾಡುತ್ತಿದ್ದಾರೆ. ನಮ್ಮ ಸಿಬ್ಬಂದಿಗಳು ನನ್ನನ್ನು ಕೇಳಿದರೆ ಏನು ಹೇಳಲಿ? ತಾಳ್ಮೆಯಿಂದ ಇದ್ದು ಸಾಯಿರಿ, ನಾನು ಸ್ವಚ್ಛವಾದ ಸಮವಸ್ತ್ರ ಧರಿಸಿ ಬಂದು ತ್ರಿವರ್ಣಧ್ವಜದಲ್ಲಿ ನಿಮ್ಮ ಪಾರ್ಥಿವಶರೀರವನ್ನು ಮನೆಗೆ ತಲುಪಿಸುತ್ತೇನೆ ಎಂದು ಹೇಳಬೇಕಾ? ಎಂದು ಪ್ರಶ್ನಿಸಿದ್ದಾರೆ.