ಕೊಚ್ಚಿ: ಕೇರಳದ ಕಣ್ಣೂರಿನಲ್ಲಿ ಆರ್ ಎಸ್ಎಸ್ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆರ್ಟಿಕಲ್ 247 ನ್ನು ಜಾರಿಗೊಳಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಕೊಚ್ಚಿಯಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಕಣ್ಣೂರಿನಲ್ಲಿ ಪೊಲೀಸರು ಹಾಗೂ ಜಿಲ್ಲಾ ಅಧಿಕಾರಿಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಲ್ಲಿ ಪರ್ಯಾಯ ಮಾರ್ಗ ಅನುಸರಿಸುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.
ಕಣ್ಣೂರಿನಲ್ಲಿ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಂವಿಧಾನದ ಆರ್ಟಿಕಲ್ 247 ನ್ನು ಜಾರಿಗೊಳಿಸುವುದು ಉತ್ತಮ ಆಯ್ಕೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಆರ್ಟಿಕಲ್ 247 ನ್ನು ಜಾರಿಗೊಳಿಸುವುದರಿಂದ ಜಿಲ್ಲಾವಾರು ಮಟ್ಟದಲ್ಲಿ ಮ್ಯಾಜಿಸ್ಟ್ರೇಟ್ ನ್ನು ನೇಮಕ ಮಾಡಲು ಸಂಸತ್ ಗೆ ಅಧಿಕಾರವಿರುತ್ತದೆ. ಸಂಸತ್ ನಿಂದ ನಿಯೋಜನೆಗೊಂಡಿರುವ ಮ್ಯಾಜಿಸ್ಟ್ರೇಟ್ ಗೆ ಯಾವುದೇ ಆದೇಶ ಹಾಗೂ ವಾರೆಂಟ್ ಜಾರಿ ಮಾಡುವುದಕ್ಕೆ ಪರಮಾಧಿಕಾರ ಇರಲಿದ್ದು ಕಣ್ಣೂರಿನಲ್ಲಿ ಆರ್ ಎಸ್ಎಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಆರ್ಟಿಕಲ್ 247 ನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರವೇ ಮ್ಯಾಜಿಸ್ಟ್ರೇಟ್ ನ್ನು ನೇಮಕ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೇ ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿ ಕೇರಳಕ್ಕೆ ಕೆಳಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣನ್ ನೀಡಿರುವ ಹೇಳಿಕೆಗೂ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಎಎಫ್ಎಸ್ ಪಿಎ ನ್ನು ಜಾರಿಗೊಳಿಸಿ ಸೇನೆ ಕಳಿಸುವುದೂ ಸಾಧ್ಯವಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕೆ ಸೇನೆಯನ್ನು ಕಳಿಸುವುದನ್ನು ವಿರೋಧಿಸಿದ್ದ ಬಾಲಕೃಷ್ಣನ್, ಕೇರಳದಲ್ಲಿ ಸೇನಾಪಡೆಗೆ ವಿಶೇಷಾಧಿಕಾರ ನೀಡಿದರೆ ಸೇನಾ ಸಿಬ್ಬಂದಿಗಳು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿದ್ದರು.