ದೇಶ

1993ರ ಮುಂಬೈ ಸ್ಫೋಟ ಪ್ರಕರಣ: ಭೂಗತ ಪಾತಕಿ ಅಬು ಸಲೇಂ ವಿರುದ್ಧ ಜೂ.16ಕ್ಕೆ ತೀರ್ಪು

Lingaraj Badiger
ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಅಬು ಸಲೇಂ ಹಾಗೂ ಇತರೆ ಆರು ಆರೋಪಿಗಳ ವಿರುದ್ದ ಜೂನ್ 16ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸೋಮವಾರ ವಿಶೇಷ ಕೋರ್ಟ್ ಘೋಷಿಸಿದೆ.
ಭೂಗತ ಪಾತಕಿ ಅಬು ಸಲೇಂ ಸೇರಿದಂತೆ ಏಳು ಆರೋಪಿಗಳನ್ನು ಇಂದು ವಿಶೇಷ ಟಾಡಾ ಕೋರ್ಟ್ ನ್ಯಾಯಾಧೀಶ ಜೆ.ಎ.ಸನಪ್ ಅವರ ಮುಂದೆ ಹಾಜರುಪಡಿಸಲಾಯಿತು.
ಅಬು ಸಲೇಂ, ಮುಸ್ತಫಾ ದೊಸ್ಸಾ, ಮೊಹಮ್ಮದ್ ತಾಹಿರ್ ಮರ್ಚಂಟ್, ಅಬ್ದುಲ್ ಕಯ್ಯುಮ್, ಕರೀಮುಲ್ಲಾ ಖಾನ್ ಹಾಗೂ ರಿಯಾಜ್ ಸಿದ್ದಿಕಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, 1995ರಲ್ಲಿ ನಡೆದ ಬಿಲ್ಡರ್ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿ ಅಬು ಸಲೇಂ ಮುಂಬೈನ ತಲೋಜ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್, ಯಾಕೂಬ್ ಮೆಮನ್ ಸೇರಿ 100 ಮಂದಿ ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. 2015ರಲ್ಲಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಲಾಗಿದೆ. ಸಂಜಯ್ ದತ್ 2016ರ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
1993ರ ಮಾರ್ಚ್ 12ರಂದು ಮುಂಬೈನ ವಿವಿಧೆಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 700 ಜನರು ಗಾಯಗೊಂಡಿದ್ರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಬಲಗೈ ಬಂಟ ಟೈಗರ್ ಮೆಮೊನ್ ಈ ಕೃತ್ಯ ನಡೆಸಿದ್ದರು.
SCROLL FOR NEXT