ಚೀನಾವನ್ನು ಹದ್ದುಬಸ್ತಿನಲ್ಲಿಡಲು ಎಲ್ಎಸಿಯಲ್ಲಿ ಸೇನಾ ಸಾಮರ್ಥ್ಯ ಹೆಚ್ಚಿಸಲಿರುವ ಭಾರತ!
ನವದೆಹಲಿ: ಭಾರತ-ಪಾಕಿಸ್ತಾನದ ಗಡಿ ನಿಯಂತ್ರಣ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಎದುರಾಗಿರುವುದು ಒಂದೆಡೆಯಾದರೆ, ಮತ್ತೊಂದು ಬದಿಯ ಗಡಿಯಲ್ಲಿ ಚೀನಾದಿಂದ ತಲೆನೋವು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾವನ್ನು ಗಡಿ ಭಾಗದಲ್ಲಿ ಹದ್ದುಬಸ್ತಿನಲ್ಲಿಡಲು ಭಾರತ ವಾಸ್ತವಿಕ ನಿಯಂತ್ರಣ ಗಡಿಯಲ್ಲಿ ತನ್ನ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
ಚೀನಾದೊಂದಿಗಿನ 4,507 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ಗಡಿ(ಎಲ್ಎಸಿ) ಯಲ್ಲಿ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಅಡಿಯಲ್ಲಿ 2 ನೇ ವಿಭಾಗವನ್ನು ಪ್ರಾರಂಭಿಸಿ ಲಡಾಕ್ ನ ಪ್ರಾಂತ್ಯದಲ್ಲಿ ಸೇನಾ ತಾಲೀಮು ನಡೆಸಲು ಭಾರತ ಸಿದ್ಧತೆ ನಡೆಸಿದೆ.
ಈಶಾನ್ಯ ಭಾಗದ ಗಡಿ ಪ್ರದೇಶದಲ್ಲಿ ಹೊಸ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನ 2 ನೇ ವಿಭಾಗ ಪ್ರಾರಂಭವಾಗಲಿದ್ದು, ಈಶಾನ್ಯದ ಗಡಿಯಲ್ಲಿ ಚೀನಾದ ಪುಂಡಾಟಿಕೆಗೆ ಅಂಕುಶ ಹಾಕಲು ಭಾರತೀಯ ಸೇನೆ ಸನ್ನದ್ಧವಾಗಿರಲಿದೆ. ರಕ್ಷಣಾ ಇಲಾಖೆಯ ಮಾಹಿತಿಯ ಪ್ರಕಾರ ಹೊಸ 72 ಇನ್ ಫಾಂಟ್ರಿ ವಿಭಾಗದ ಕೇಂದ್ರ ಕಚೇರಿ ಪಠಾಣ್ ಕೋಟ್ ನಲ್ಲಿರಲಿದ್ದು, ಇನ್ನು 3 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ, ಮೊದಲ ಹಂತದಲ್ಲಿ ಒಂದು ಬ್ರಿಗೇಡ್ ನ್ನು ಮಾತ್ರ ಪ್ರಾರಂಭಿಸಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾದ ನಂತರ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಅಡಿಯಲ್ಲಿ ಒಟ್ಟು 3 ಬ್ರಿಗೇಡ್ ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ.
ಭಾರತೀಯ ಸೇನೆಯಲ್ಲಿ 2014 ರ ವರೆಗೂ ಇದ್ದ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನ ಸಿಬ್ಬಂದಿಗಳು ಬಹುತೇಕ ಪಾಕಿಸ್ತಾನದಿಂದ ಎದುರಾಗುವ ಸಮಸ್ಯೆ, ಅಪಾಯಗಳನ್ನೇ ನಿರ್ವಹಿಸುತ್ತಿದ್ದರು. ಈ ಕಾರಣದಿಂದ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿತ್ತಾದ್ದರಿಂದ 2014 ರಲ್ಲಿ ಭಾರತ ಸರ್ಕಾರ 17 ಹೊಸ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics