ದೇಶ

ಐಸಿಎಸ್ ಸಿ ಫಲಿತಾಂಶ ಪ್ರಕಟ: ಕೋಲ್ಕತ್ತಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ

Sumana Upadhyaya
ನವದೆಹಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್(ಸಿಐಎಸ್ ಸಿಇ) ಸೋಮವಾರ 10 ಮತ್ತು ಐಎಸ್ ಸಿಯ 12ನೇ  ತರಗತಿ ಫಲಿತಾಂಶವನ್ನು ಪ್ರಕಟಿಸಿದೆ.
ಕೋಲ್ಕತ್ತಾದ ಹೆರಿಟೇಜ್ ಸ್ಕೂಲ್ ನ ವಿದ್ಯಾರ್ಥಿನಿ ಅನನ್ಯ ಮೈತಿ 12ನೇ  ತರಗತಿಯಲ್ಲಿ ಶೇಕಡಾ 99.5 ಅಂಕ ಗಳಿಸುವ  ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. 2ನೇ ಸ್ಥಾನವನ್ನು 4 ವಿದ್ಯಾರ್ಥಿಗಳು ಹಂಚಿಕೊಂಡಿದ್ದು ಶೇಕಡಾ 99.25 ಅಂಕ ಗಳಿಸಿದ್ದಾರೆ. ಅವರು ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆಯ ಆಯುಷಿ ಶ್ರೀವಾಸ್ತವ, ಕೋಲ್ಕತ್ತಾದ ಸೈಂಟ್ ಕ್ಸೇವಿಯರ್ ಶಾಲೆಯ ದೇವೇಶ್ ಲಕೊಟಿಯಾ, ಮುಂಬೈಯ ಜಮ್ನಬಾಯ್ ನರ್ಸಿ ಶಾಲೆಯ ರಿಶಿತಾ ದರಿವಾಲ್ ಮತ್ತು ಗುರುಗಾವ್ ನ ಸ್ಕಾಟಿಶ್ ಹೈ ಇಂಟರ್ ನ್ಯಾಷನಲ್ ಶಾಲೆಯ ಕೀರ್ತನಾ ಶ್ರೀಕಾಂತ್ ಆಗಿದ್ದಾರೆ.ಮೂರನೇ ಸ್ಥಾನವನ್ನು ಕೋಲ್ಕತ್ತಾದ ಅನಂತ್ ಶೇಕಡಾ 99 ಅಂಕ ಗಳಿಸುವ ಮೂಲಕ ಪಡೆದಿದ್ದಾರೆ.
ಈ ವರ್ಷ 12ನೇ ತರಗತಿಯ ಒಟ್ಟಾರೆ ಶೇಕಡಾ 96.47 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 73,633 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 33,930 ಬಾಲಕಿಯರು ಮತ್ತು 39,703 ಬಾಲಕರಿದ್ದರು. ಬಾಲಕಿಯರ ವಿಭಾಗದಲ್ಲಿ 33,161 ಮಂದಿ ತೇರ್ಗಡೆ ಹೊಂದಿದ್ದು 769 ಮಂದಿ ಅನುತ್ತೀರ್ಣರಾಗಿದ್ದಾರೆ. ಬಾಲಕರಲ್ಲಿ 37,872 ಮಂದಿ ಪೈಕಿ 1,831 ಮಂದಿ ಅನುತ್ತೀರ್ಣರಾಗಿದ್ದಾರೆ. ಒಟ್ಟು 988 ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. 
10ನೇ ತರಗತಿಯಲ್ಲಿ ಶೇಕಡಾ 98.53 ವಿದ್ಯಾರ್ಥಿಗಳು ತೇರ್ಗಡೆ  ಹೊಂದಿದ್ದಾರೆ. ಒಟ್ಟು 1,75,299 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು. 
10 ಮತ್ತು 12ನೇ ತರಗತಿ ಎರಡರಲ್ಲಿಯೂ ಬಾಲಕಿಯರೇ ಬಾಲಕರಿಗಿಂತ ಮುಂದಿದ್ದಾರೆ. 
ವಿದ್ಯಾರ್ಥಿಗಳು ತಮ್ಮ  ಫಲಿತಾಂಶವನ್ನು www.cisce.org ವೆಬ್ ಸೈಟ್ ನಲ್ಲಿ Results 2017' ಎಂದು ಕ್ಲಿಕ್ ಮಾಡಿ ನೋಡಬಹುದು. ಅಥವಾ ಎಸ್ಎಂಎಸ್ ಮೂಲಕ ಕೂಡ ಪಡೆಯಬಹುದು. ಮೊಬೈಲ್ ಟೆಕ್ಟ್ಸ್, ಕೌನ್ಸಿಲ್ ವೆಬ್ ಸೈಟ್ ಮತ್ತು ಕೆರಿಯರ್ಸ್ ಪೋರ್ಟಲ್ ಮೂಲಕ ಕೂಡ ಫಲಿತಾಂಶವನ್ನು ನೋಡಬಹುದು. 
ಶಾಲೆಗಳನ್ನು ಫಲಿತಾಂಶ ನೋಡಲು ಮಂಡಳಿಯ ಕೆರಿಯರ್ಸ್ ಪೋರ್ಟಲ್ ನಲ್ಲಿ ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಹಾಕಬೇಕು.
ಕಳೆದ ವರ್ಷ ಐಎಸ್ ಸಿ ಮತ್ತು ಐಸಿಎಸ್ ಸಿಯಲ್ಲಿ ತೇರ್ಗಡೆ ಹೊಂದಿದವರ ಸಂಖ್ಯೆ ಶೇಕಡಾ 98.64ರಷ್ಟಾಗಿತ್ತು. 
ವಿದ್ಯಾರ್ಥಿಗಳು ಯಾವಾಗ, ಎಲ್ಲಿ ಬೇಕಾದರೂ ತಮ್ಮ ಅಂಕಪಟ್ಟಿಯ ಡಿಜಿಟಲ್ ಪ್ರತಿ ಮತ್ತು ಸರ್ಟಿಫಿಕೇಟ್  ಗಳನ್ನು ಪಡೆದುಕೊಳ್ಳಬಹುದು.
SCROLL FOR NEXT