ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ
ಶ್ರೀನಗರ: ಉದ್ವಿಗ್ನತೆ ಹಾಗೂ ಹಿಂಸಾಚಾರಗಳನ್ನು ಹತ್ತಿಕ್ಕಬೇಕಾದರೆ, ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರುವುದೊಂದೇ ಉಳಿದಿರುವ ದಾರಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ.
ರಾಜ್ಯಪಾಲರ ಆಡಳಿತ ಹೇರುವುದಕ್ಕೆ ನಾವು ಈ ಹಿಂದೆ ಎಂದಿಗೂ ಪ್ರೋತ್ಸಾಹವನ್ನು ನೀಡಿರಲಿಲ್ಲ. ಇದಕ್ಕೆ ನಾವು ಯಾವಾಗಲೂ ವಿರೋಧ ವ್ಯಕ್ತಪಡಿಸುತ್ತಿದ್ದೆವು. ಆದರೆ, ಇದೀಗ ಕಾಶ್ಮೀರ ಸುರಕ್ಷಿತವಾಗಿರಬೇಕೆಂದರೆ ರಾಜ್ಯಪಾಲರ ಆಡಳಿತ ಹೇರುವುದೊಂದೇ ಉಳಿದಿರುವ ದಾರಿಯಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿನ ಪರಿಸ್ಥಿತಿಗೆ ಶಾಂತಿ ಮೂಲಕ ಅಂತ್ಯ ಹಾಡಬೇಕೆಂದು ಪ್ರಧಾನಿ ಮೋದಿಯವರು ಬಯಸಿದ್ದಾರೆ. ಪ್ರಧಾನಮಂತ್ರಿಗಳೊಂದಿಗೆ ನಡೆಸಲಾದ ಚರ್ಚೆ ಬಗ್ಗೆ ನಾನು ಯಾವುದೇ ಮಾಹಿತಿಗಳನ್ನು ನೀಡುವುದಿಲ್ಲ. ಆದರೆ, ಕಾಶ್ಮೀರದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡಬೇಕೆಂದು ಪ್ರಧಾನಮಂತ್ರಿಗಳು ಬಯಸಿದ್ದಾರೆಂಬುದನ್ನು ಮಾತ್ರ ನಾನು ಹೇಳುತ್ತೇನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸುವುದರಲ್ಲಿ ಮುಫ್ತಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕೇವಲ ದಕ್ಷಿಣ ಕಾಶ್ಮೀರದಲ್ಲಷ್ಟೇ ಅಲ್ಲದೆ, ಇಡೀ ಕಾಶ್ಮೀರದಲ್ಲಿ ಪರಿಸ್ಥಿತಿ ದುರಂತಕ್ಕೆ ತಿರುಗಿದೆ. ಈ ದುರಂತಗಳು ಇಡೀ ದೇಶದಲ್ಲಿ ಕೋಮು ಘರ್ಷಣೆಗೆ ಕಾರಣವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಈ ಸಮಸ್ಯೆಗೆ ಅಂತ್ಯ ಹಾಡಬೇಕಿದೆ. ಕಾಶ್ಮೀರ ಈಗಲೇ ಕುದಿಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಬಾರದು. ಎಲ್ಲರದ್ದೂ ಒಂದೇ ದನಿಯಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಾಂತಿಯನ್ನು ಪಠಿಸುತ್ತಿದ್ದು, ಎಲ್ಲರೂ ಅವರ ಮಾತನ್ನು ಕೇಳಬೇಕಿದೆ ಎಂದು ತಿಳಿಸಿದ್ದಾರೆ.