ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ತಿರುವನಂತಪುರ: ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ಆದೇಶದ ವಿರುದ್ಧ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಕರುವೊಂದನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಆದೇಶದ ವಿರುದ್ಧ ಕೇರಳದ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು. ಪ್ರತಿಭಟನೆಯಲ್ಲಿ 18 ತಿಂಗಳ ಕರುವೊಂದನ್ನು ಸಾರ್ವಜನಿಕವಾಗಿಯೇ ಹತ್ಯೆ ಮಾಡಿರುವುದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಪ್ರಕರಣ ಸಂಬಂಧ 16 ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ಖಂಡನೆ ವ್ಯಕ್ತಪಡಿಸಿದ್ದಾರೆ. ಇಂಥ ವಿವೇಚನೆ ಇಲ್ಲದ, ಸ್ವೀಕಾರಾರ್ಹವಲ್ಲದ, ಕ್ರೂರ ಕೃತ್ಯಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಕೇರಳ ರಾಜ್ಯ ಸರ್ಕಾರವು ಕೇಂದ್ರ ನಿಯಗಳಿಗೆ ಸಡ್ಡು ಹೊಡೆಯಲು ತನ್ನದೇ ಆದ ಪ್ರತ್ಯೇಕ ಕಾಯ್ದೆ ತರುವ ಸುಳಿವುಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಕರುವಿನ ಶಿರಚ್ಛೇದ ಮಾಡಿರುವ ವಿಡಿಯೋವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಕ್ರೂರತೆಯ ಪರಾಕಾಷ್ಠೆ. ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿ ಕರು ಹತ್ಯೆ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಕರುವಿನ ಶಿರಚ್ಛೇದ ಮಾಡುತ್ತಿರುವ ದೃಶ್ಯವನ್ನು ಮೂವರು ಸಣ್ಣ ಮಕ್ಕಳು ನೋಡುತ್ತಿರುವುದು ವಿಡಿಯೋದಲ್ಲಿ ಒಳಗೊಂಡಿದೆ. ಆದರೆ, ಇದನ್ನು ತಿರಸ್ಕರಿಸಿರುವ ಕಾಂಗ್ರೆಸ್ ಹತ್ಯೆ ವೇಳೆ ಸ್ಥಳದಲ್ಲಿ ಮಕ್ಕಳು ಇರಲಿಲ್ಲ ಎಂದು ಪ್ರತಿಪಾದಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos