ಲಖನೌ: ಬಾಬ್ರಿ ಮಸೀದಿ ಪ್ರಕರಣ ಸಂಬಂಧ ನನ್ನನ್ನು ನಾನು ಅಪರಾಧಿ ಎಂದು ಪರಿಗಣಿಸುವುದಿಲ್ಲ..ಹಾಗೆಯೇ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
ಲಖನೌ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಆಗಮಿಸಿದ್ದ ಉಮಾಭಾರತಿ ಅವರು ವಿಚಾರಣೆಗೂ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ "ನಾನು ಕ್ರಿಮಿನಲ್ ಅಲ್ಲ.. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನ್ನನ್ನು ನಾನು ಅಪರಾಧಿ ಎಂದು ಪರಿಗಣಿಸುವುದೂ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಸೃಷ್ಟಿಯಾದಂತಹ ಪರಿಸ್ಥಿತಿ ಸೃಷ್ಟಿಯಾದ ಪರಿಣಾಮ ಘಟನೆ ನಡೆಯಿತು .ಈ ಪ್ರಕರಣ ದೇವರಿಗೆ ಸಂಬಂಧಿಸಿದ್ದು ಎಂದು ಹೇಳಿದರು.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಉಮಾಭಾರತಿ , ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಮುರಳೀ ಮನೋಹರ್ ಜೋಶಿ ಸೇರಿದಂತೆ ಎಲ್ಲ 12 ಆರೋಪಿಗಳು ಇಂದು ಖುದ್ಧು ವಿಚಾರಣೆಗೆ ಹಾಜರಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇನ್ನು ಬಾಬರಿ ಮಸೀದಿ ಧ್ವಂಸ ಮತ್ತು ಮಸೀದಿ ಧ್ವಂಸ ಮಾಡಲು ಕರಸೇವಕರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಡ್ವಾಣಿ, ಜೋಶಿ, ಉಮಾಭಾರತಿ ಮತ್ತಿತರ ನಾಯಕರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ನಮ್ಮ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದರೂ, ಆರೋಪ ಪಟ್ಟಿ ವಿಚಾರಣೆ ನಡೆಯಲಿದೆ: ಆರೋಪಿಗಳ ಪರ ವಕೀಲ
ಇನ್ನು ವಿಚಾರಣೆ ಮುಕ್ತಾಯದ ಬಳಿಕ ಮಾತನಾಡಿದ ಆರೋಪಿಗಳ ಪರ ವಕೀಲ ಪ್ರಶಾಂತ್ ಅಟಲ್ ಅವರು, ನಮ್ಮ ಡಿಸ್ಚಾರ್ಜ್ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ದಾಖಲು ಮಾಡಿ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದರು.