ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್
ಬಿಕನೆರ್: ಜನರು ಏನನ್ನು ತಿನ್ನಬೇಕು ಹಾಗೂ ಏನನ್ನು ತಿನ್ನಬಾರದು ಎಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಆದೇಶ ವಿರೋಧಿಸಿ ಕೇರಳದಲ್ಲಿ ನಡೆಸಲಾದ ಬೀಫ್ ಫೆಸ್ಟ್ ಮತ್ತು ಕರುವಿನ ಶಿರಚ್ಛೇದ ಪ್ರಕರಣಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಜನರು ಏನನ್ನು ತಿನ್ನಬೇಕು ಹಾಗೂ ಏನನ್ನು ತಿನ್ನಬಾರದು ಎಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ. ಆದರೆ, ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಸರಿಯಲ್ಲ. ಇದು ಕಾಂಗ್ರೆಸ್ ನ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ನಂತರ ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಮಾತನಾಡಿರುವ ಅವರು, ಮೂರು ವರ್ಷಗಳಲ್ಲಿ ಸರ್ಕಾರ ಉತ್ತಮ ರೀತಿಯ ನಿರ್ಧಾರಗಳನ್ನು ಹಾಗೂ ಕ್ರಮಗಳನ್ನು ಕೈಗೊಂಡಿದೆ. ಭ್ರಷ್ಚಾಚಾರವನ್ನು ದೇಶದಿಂದ ತೊಲಗಿಸಲು ಹಾಗೂ ಉತ್ತಮ ಆಡಳಿತಕ್ಕಾಗಿ ಸರ್ಕಾರ ಪಾರದರ್ಶಕತೆಯ ನಿರ್ಧಾರಗಳನ್ನು ತೆಗೆದುಕೊಂಡಿತ್ತು.
ಸರ್ಕಾರದ ಉತ್ತಮ ನಿರ್ಧಾರಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ. ಸಮಾನ ವೇತನ ಮತ್ತು ಸಮಾನ ಪಿಂಚಣಿಯಿಂದ ಮಾಜಿ ಯೋಧರಿಗೆ ಸಹಾಯವಾಗಿದೆ. ಇದರಂತೆ ಸರ್ಕಾರ ದೇಶದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಸಾಕಷ್ಟು ಉತ್ತಮ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.