ದೇಶ

ಲಡಾಕ್ ನಲ್ಲಿ 19,300 ಅಡಿಯ ವಿಶ್ವದ ಅತಿ ಎತ್ತರದ ರಸ್ತೆ ನಿರ್ಮಾಣ

Sumana Upadhyaya
ಜಮ್ಮು: ಜಮ್ಮು-ಕಾಶ್ಮೀರದ ಲಡಾಕ್ ಪ್ರಾಂತ್ಯದಲ್ಲಿ ವಿಶ್ವದ ಅತಿ ಎತ್ತರದ ವಾಹನಗಳು ಸಂಚರಿಸುವ ರಸ್ತೆಯನ್ನು ಗಡಿ ರಸ್ತೆ ಪ್ರಾಧಿಕಾರ(ಬಿಆರ್ ಒ)ನಿರ್ಮಿಸಿದ್ದು ಉಮ್ಲಿಂಗ್ಲ ಟಾಪ್ ಮೇಲೆ ಹಾದುಹೋಗುವ ಈ ರಸ್ತೆ 19,300 ಅಡಿ ಎತ್ತರವನ್ನು ಹೊಂದಿದೆ.
ಗಡಿ ರಸ್ತೆ ಪ್ರಾಧಿಕಾರದ ಹಿಮಂಕ್ ಪ್ರಾಜೆಕ್ಟ್ ಅಡಿ ಇದನ್ನು ನಿರ್ಮಿಸಲಾಗಿದೆ. ಹನ್ಲೆಗೆ ಸಮೀಪವಿರುವ 86 ಕಿಲೋ ಮೀಟರ್ ಉದ್ದದ ರಸ್ತೆ ಚಿಸುಮ್ಲೆ ಮತ್ತು ಡೆಮ್ಚೊಕ್ ಗ್ರಾಮಕ್ಕೆ ಸಂಪರ್ಕಿಸುತ್ತಿದ್ದು ಲೇಹ್ ನಿಂದ 230 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮ ಪೂರ್ವ ಪ್ರಾಂತ್ಯದಲ್ಲಿ ಇಂಡೊ-ಚೀನಾ ಗಡಿ ಭಾಗದಿಂದ ಕೂಗಳತೆ ದೂರದಲ್ಲಿದೆ ಎಂದು ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಬಿಆರ್ ಒ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದ ಪ್ರಾಜೆಕ್ಟ್ ಹಿಮಂಕ್ ನ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಡಿ.ಎಮ್.ಪೂರ್ವಿಮತ್, 19,300 ಅಡಿ ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸುವುದು ಜೀವಕ್ಕೆ ಸವಾಲೊಡ್ಡುವ ಕೆಲಸವಾಗಿತ್ತು. ಅಲ್ಲಿನ ಹವಾಮಾನ ಯಾವಾಗಲೂ ಕೆಲಸಕ್ಕೆ ಅಡ್ಡಿಯನ್ನುಂಟುಮಾಡುತ್ತಿತ್ತು. ಬೇಸಿಗೆಯಲ್ಲಿ ಇಲ್ಲಿನ ಉಶ್ಣಾಂಶ ಸುಮಾರು ಮೈನಸ್ 10-20 ಡಿಗ್ರಿ ಸೆಲ್ಸಿಯಸ್ ಗೆ ಹೋಗುತ್ತಿತ್ತು, ಚಳಿಗಾಲದಲ್ಲಿ ಮೈನಸ್ 40 ಡಿಗ್ರಿಗೆ ಇಳಿಯುತ್ತಿತ್ತು. ಸಹಜ ಪ್ರದೇಶಗಳಿಗಿಂತ ಇಲ್ಲಿ ಆಮ್ಲಜನಕದ ಮಟ್ಟ ಶೇಕಡಾ 50ರಷ್ಟು ಕಡಿಮೆಯಿರುತ್ತಿತ್ತು ಎಂದು ಪೂರ್ವಿಮತ್ ತಿಳಿಸಿದ್ದಾರೆ.
ಆಮ್ಲಜನಕದ ಮಟ್ಟ ಇಳಿಕೆ ಮತ್ತು ಕಠಿಣ ಹವಾಮಾನದಿಂದಾಗಿ ಯಂತ್ರಗಳು ಮತ್ತು ಕಾರ್ಮಿಕರ ಕಾರ್ಯಕ್ಷಮತೆ ಶೇಕಡಾ 50ರಷ್ಟು ಕಡಿಮೆಯಾಗುತ್ತಿತ್ತು. ಪ್ರತಿ 10 ನಿಮಿಷಗಳಿಗೊಮ್ಮೆ ಆಮ್ಲಜನಕಕ್ಕಾಗಿ ಯಂತ್ರ ನಿರ್ವಾಹಕರು ಕೆಳಗಿಳಿದು ಬರಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
SCROLL FOR NEXT