ಒಡಿಶಾ: ಬಾಣಂತಿಯಿದ್ದ ಮಂಚವನ್ನು 8 ಕಿ.ಮೀ ದೂರು ಹೊತ್ತು ಸಾಗಿದ ವೈದ್ಯರು
ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಮೃತಪಟ್ಟಿರುವ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಭುವನೇಶ್ವರದಲ್ಲಿ ವೈದ್ಯರೊಬ್ಬರು ಸುಮಾರು 8 ಕಿ.ಮೀ...
ಭುವನೇಶ್ವರ್: ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಮೃತಪಟ್ಟಿರುವ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಭುವನೇಶ್ವರದಲ್ಲಿ ವೈದ್ಯರೊಬ್ಬರು ಸುಮಾರು 8 ಕಿ.ಮೀ ದೂರ ಬಾಣಂತಿಯಿದ್ದ ಮಂಚದ ಸಮೇತ ಹೊತ್ತೊಯ್ದು ಮಾದರಿಯಾಗಿದ್ದಾರೆ.
ಒಡಿಶಾದ ಮಾಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸರಿಯಾಗಿ ಓಡಾಡಲು ದಾರಿ ಇಲ್ಲದ ಕಾರಣ ಜಿಲ್ಲೆಯ ವೈದ್ಯರಾಗಿರುವ ಡಾ. ಓಂಕಾರ್ ಹೋಟಾ ಅವರು ಬಾಣಂತಿಯನ್ನು 8 ಕಿ.ಮೀ ದೂರದ ಗ್ರಾಮದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಪಡೆದ ಓಂಕಾರ್ ಅವರು ಅಟೆಂಡೆರ್ ಒಬ್ಬರ ಜತೆ ಸರಿಗೆಟಾ ಗ್ರಾಮಕ್ಕೆ ದೌಡಾಯಿಸಿದರು. ಗರ್ಭೀಣಿಗೆ ಅದಾಗಲೇ ಅತಿಯಾದ ರಕ್ತಸ್ರಾವವಾಗಿದ್ದರಿಂದ ಗ್ರಾಮದಲ್ಲೇ ವೈದ್ಯರು ಆಕೆಗೆ ಹೆರಿಗೆ ಮಾಡಿಸಿದರು. ಹೆರಿಗೆ ನಂತರ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದರು.
ಗ್ರಾಮಸ್ಥರ ವಿರೋಧದ ನಡುವೆಯೂ ಬಾಣಂತಿಯನ್ನು ಮಂಚದ ಮೇಲೆ ಮಲಗಿಸಿಕೊಂಡು ಆಸ್ಪತ್ರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಯ್ದಿದ್ದಾರೆ. ಈ ಮೂಲಕ ಓಂಕಾರ್ ಅವರು ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ.