ಸೂರತ್: ನೋಟುಗಳ ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ಗುಜರಾತ್ ನ ಸೂರತ್ ವ್ಯಾಪಾರಿಗಳನ್ನು ದಿಕ್ಕು ಕಾಣದಂತೆ ಮಾಡಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದ ಬಟ್ಟೆ ಮತ್ತು ವಜ್ರ ವ್ಯಾಪಾರ ಕೇಂದ್ರವಾದ ಸೂರತ್ ನಲ್ಲಿ ನಿನ್ನೆ ಕರಾಳ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಕೈಗಾರಿಕಾ ಪ್ರತಿನಿಧಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಮೇಲೆ ಸರ್ಕಾರ ವರ್ಷದ ಹಿಂದೆ ದಾಳಿ ನಡೆಸಿತು. ಸೂರತ್ ವ್ಯಾಪಾರಿಗಳನ್ನು ಜಿಎಸ್ ಟಿ ಮತ್ತು ನೋಟುಗಳ ಅಮಾನ್ಯೀಕರಣ ದಿಕ್ಕೆಡಿಸಿದೆ.ಕೈಗಾರಿಕೆಗಳು ಆರ್ಥಿಕತೆ ಮೇಲೆ ಎರಡು ಮುಖ್ಯ ನಿರ್ಧಾರಗಳಿಂದ ನಲುಗಿ ಹೋಗಿದೆ. ಜನರ ಬದುಕಿಗೆ ಕಷ್ಟವಾಗಿದೆ ಎಂದು ಜನರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅರಿವಿಗೆ ಬಂದಿದೆ ಎಂದು ಹೇಳಿದರು.
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಲ್ಲ, ಬದಲಿಗೆ ಇಡೀ ಭಾರತಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದರು.
ಈ ಮಧ್ಯೆ ರಾಹುಲ್ ಗಾಂಧಿಯವರು ಕಟಗ್ರಮ್ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ನಿರ್ಮಾಣ್ ಇಂಡಸ್ಟ್ರಿಗೆ ಬರುತ್ತಿದ್ದ ವೇಳೆ ಅಲ್ಲಿನ ವ್ಯಾಪಾರಿಗಳು ಮೋದಿ ಮೋದಿ ಎಂದು ಕೂಗುತ್ತಿದ್ದ ವಿಡಿಯೊವನ್ನು ದೆಹಲಿಯ ಬಿಜೆಪಿ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ರಾಹುಲ್ ಗಾಂಧಿಯವರು ಸುಳ್ಳು ಹೇಳುವುದನ್ನು ಮತ್ತು ಹಗಲು ಕನಸು ಕಾಣುವುದನ್ನು ನಿಲ್ಲಿಸಬೇಕೆಂದು ಭಾರತೀಯ ಜನತಾ ಪಾರ್ಟಿ ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿದೆ.